ಯಾದಗಿರಿ: ಕೊರೊನಾ ಅಟ್ಟಹಾಸಕ್ಕೆ ಇಡೀ ದೇಶವೇ ತಲ್ಲಣಗೊಂಡು ಸಾರಿಗೆ ಸಂಚಾರವನ್ನೇ ಬಂದ್ ಮಾಡಲಾಗಿತ್ತು. ಆದ್ರೆ ಸರ್ಕಾರ ಸಾಕಷ್ಟು ನಿಯಮಾವಳಿ ಜಾರಿಗೆ ತಂದು, ಕಟ್ಟುನಿಟ್ಟಾಗಿ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ.
ಆದರೆ ಈಗ ಬಸ್ನಲ್ಲಿ ಪ್ರಯಾಣಿಕರು ಸಾಮಾಜಿಕ ಅಂತರ, ಮಾಸ್ಕ್ ಧರಿಸದೇ ಬೇಕಾಬಿಟ್ಟಿ ಪ್ರಯಾಣ ಬೆಳೆಸುತ್ತಿದ್ದಾರೆ. ಮೇಲಾಗಿ ಬಸ್ನಲ್ಲೇ ಎಣ್ಣೆ ಪಾರ್ಟಿ ಮಾಡಿದ್ದು, ಇಡೀ ಬಸ್ ಪ್ರಯಾಣಿಕರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.
ಕೆಎಸ್ಆರ್ಟಿಸಿ ಬಸ್ ನಿರ್ವಾಹಕರು ಮತ್ತು ಚಾಲಕರ ಕಣ್ಣೇದುರೇ ಪ್ರಯಾಣಿಕರಿಬ್ಬರು ರಾಜಾರೋಷವಾಗಿ ಬಸ್ ಒಳಗೆ ಎಣ್ಣೆ ಹೊಡೆದು ನಶೆಯಲ್ಲಿ ತೇಲಾಡಿದ್ದಾರೆ. ಜುಲೈ 27ರಂದು ಬೆಂಗಳೂರಿನಿಂದ ಯಾದಗಿರಿಗೆ ಬಂದ KA-33-F-0447 ನಂಬರಿನ ಬಸ್ನಲ್ಲಿ ರಾತ್ರಿ ಪ್ರಯಾಣಿಕರು ಭರ್ಜರಿ ಎಣ್ಣೆ ಪಾರ್ಟಿ ಮಾಡಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಯಾದಗಿರಿ ಬಸ್ ಡಿಪೋದ ಬಸ್ನಲ್ಲಿ ನಡೆದ ಈ ಅವಾಂತರದಿಂದ ಬಸ್ನಲ್ಲಿದ್ದ ಕೆಲ ಮಹಿಳಾ ಪ್ರಯಾಣಿಕರು, ಭಯದಿಂದಲೇ ಪ್ರಯಾಣ ಬೆಳೆಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ನಿಷೇಧವಿದ್ರೂ ಮದ್ಯಪಾನ ಮಾಡಿದ್ದು ಇಡೀ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕುಡುಕರಿಗೆ ಎಣ್ಣೆ ಹೊಡಿಯಲು ಸಾಥ್ ನೀಡಿದ ಚಾಲಕ ಮತ್ತು ನಿರ್ವಾಹಕರನ್ನು ಅಮಾನತುಗೊಳಿಸಬೇಕೆಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.