ಯಾದಗಿರಿ: ಅಕ್ಷರದ ಅವ್ವ ಸಾವಿತ್ರಿ ಬಾಯಿ ಪುಲೆ.. ಆ ತಾಯಿಯ ಪ್ರತಿರೂಪದಂತಿದಾರೆ ಇವರು. ಈ ಹಳ್ಳಿಗೇ ಇವರು ಕೂಡ ಅಕ್ಷರದವ್ವನಂತೆ. ಹೆಸರು ಪದ್ಮಲತಾ. ಯಾದಗಿರಿ ಜಿಲ್ಲೆ ಹೇಳಿಕೇಳಿ ಗಡಿ ಪ್ರದೇಶ. ಇಲ್ಲಿನ ವಡಗೇರಾ ತಾಲೂಕಿನ ಕೊಂಕಲ್ ಪ್ರೌಢ ಶಾಲೆಗೆ 2004ರಲ್ಲಿ ಇವರು ಶಿಕ್ಷಕಿಯಾಗಿ ನೇಮಕವಾದಾಗ. ಈ ಹಳ್ಳಿ ಇಂಥ ಶೈಕ್ಷಣಿಕ ವಾತಾವರಣ ಹೊಂದಿರಲಿಲ್ಲ. ಬಾಲಕಿಯರು ಶಾಲೆ ಮೆಟ್ಟಿಲು ತುಳಿಯಲು ಹಿಂದೇಟು ಹಾಕ್ತಾಯಿದ್ದರು.
ಆದರೆ, 16 ವರ್ಷದಿಂದ ಇಲ್ಲಿ ತಮ್ಮ ಸೇವೆ ಸಲ್ಲಿಸುತ್ತಿರುವ ಈ ಮೇಡಂ, ಹಳ್ಳಿ ಬಾಲಕಿಯರು ಮತ್ತು ಅವರ ಪೋಷಕರ ಮನಸ್ಥಿತಿಯನ್ನೇ ಬದಲಿಸಿದ್ದಾರೆ. ಇದೇ ಹಳ್ಳಿಯ ಬಾಡಿಗೆ ಮನೆಯಲ್ಲಿದ್ಕೊಂಡೇ ಹೆಚ್ಚು ಹೆಚ್ಚು ಬಾಲಕಿಯರು ಶಾಲೆಗೆ ಬರುವಂತೆ ಮತ್ತು ಅವರ ಬದುಕಿನಲ್ಲಿ ಸುಶಿಕ್ಷಿತರಾಗುವಂತೆ ಮಾಡುವಲ್ಲಿ ಇವರ ಪಾತ್ರ ಹಿರಿದು. ಅದಕ್ಕೆ ಈಗ ಶಾಲೆಯಲ್ಲಿ ಬಾಲಕಿಯ ಹಾಜರಾತಿಯೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.
ಮೊದಲು ಇದೇ ಊರಿಗೆ ಮಹಿಳಾ ಶಿಕ್ಷಕಿಯರು ಬರಲು ಹಿಂಜರಿಯುತ್ತಿದ್ದರು. ಆದರೆ, ಸಮಾಜ-ವಿಜ್ಞಾನ ಪಾಠ ಮಾಡುವ ಪದ್ಮಾಲತಾ ಅವರು ಇಲ್ಲಿಗೆ ಬಂದು ಸರ್ಕಾರಿ ಶಾಲೆ ಮತ್ತು ಊರಿನ ಮಕ್ಕಳ ಬದುಕನ್ನೇ ರೂಪಿಸ್ತಿದ್ದಾರೆ.
2004ರಲ್ಲಿ ಆರು ಬಾಲಕಿಯರಿದ್ದರು. ಆದರೆ, ಇಂದು ಶೇ.50% ಬಾಲಕಿಯರಿದ್ದಾರೆ. SSLC ಫಲಿತಾಂಶವು ಕೂಡ ಹೆಚ್ಚಿದೆ. ಅಲ್ಲದೇ ಪ್ರತಿ ವರ್ಷ ಬಾಲಕರ ಜತೆ ಬಾಲಕಿಯರು ಸಹ ಹೆಚ್ಚಿನ ಅಂಕ ಗಳಿಸ್ತಿದ್ದಾರೆ.
2013ರಿಂದ ಮುಖ್ಯೋಪಾಧ್ಯಾಯರಾಗಿರುವ ಇವರ ಈ ಕಾರ್ಯಕ್ಕೆ 2015ರಲ್ಲಿ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಿಂದ ಜಿಲ್ಲೆಯ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಸಂದಿದೆ. ಇವರ ಬಳಿ ಕಲಿತ ಅನೇಕ ವಿದ್ಯಾರ್ಥಿಗಳು ಇಂದು ಸರ್ಕಾರಿ ನೌಕರರಾಗಿದ್ದಾರೆ. ಹೆಣ್ಣು ಮನಸ್ಸು ಮಾಡಿದ್ರೇ ಏನಾದ್ರೂ ಸಾಧಿಸಲು ಸಾಧ್ಯ ಅನ್ನೋದು ಇದಕ್ಕೇ ಅಲ್ವೇ.