ಯಾದಗಿರಿ: ಕೊರೊನಾದಿಂದ ತತ್ತರಿಸಿರುವ ರೈತರಿಗೆ ಈಗ ಜಾನುವಾರುಗಳಲ್ಲಿ ಕಂಡು ಬರುತ್ತಿರುವ ಮತ್ತೊಂದು ಕಾಯಿಲೆಯಿಂದ ಆತಂಕ ಹೆಚ್ಚಾಗಿದೆ.
ಯಾದಗಿರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಲಂಪಿ ಎಂಬ ಚರ್ಮ ರೋಗ ಅಂಟುತ್ತಿದೆ. ಬಹಳ ವರ್ಷಗಳ ನಂತರ ಜಾನುವಾಗಳಿಗೆ ಈ ರೋಗ ಹರಡುತ್ತಿದೆ. ಪಶುಸಂಗೋಪನೆ ಸಚಿವ ಪ್ರಭು ಚೌವ್ಹಾಣ್ ಅವರ ತವರಲ್ಲೇ ಈ ಮಾರಕ ರೋಗ ಕಂಡು ಬಂದಿದ್ದು, ರೈತಾಪಿ ವರ್ಗಕ್ಕೆ ಸಂಕಷ್ಟ ಎದುರಾಗಿದೆ. ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜಾನುವಾರುಗಳಲ್ಲಿ ಈ ರೋಗ ಪತ್ತೆಯಾಗಿದೆ. ರೋಗ ಪೀಡಿತ ಜಾನುವಾರುಗಳಿಂದ ಬೇರೆ ಜಾನುವಾರುಗಳಿಗೆ ಈ ರೋಗ ಹರಡುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ರೋಗ ಪೀಡಿತ ಜಾನುವಾರುಗಳನ್ನು ರೈತರು ಜಮೀನು ಹಾಗೂ ಮನೆಯಲ್ಲಿ ಪ್ರತ್ಯೇಕವಾಗಿ ಕ್ವಾರಂಟೈನ್ ಮಾಡುತ್ತಿದ್ದಾರೆ.
ಲಂಪಿ ಕಾಯಿಲೆಗೆ ಯಾವುದೇ ಔಷಧವಿಲ್ಲ. ಹಾಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಗಳನ್ನು ನೀಡುವುದರ ಜೊತೆಗೆ ರೋಗ ಪೀಡಿತ ಜಾನುವಾರುಗಳನ್ನು ಪ್ರತ್ಯೇಕವಾಗಿ ಇರಿಸಿ ರೋಗ ಜಿಲ್ಲೆಯ ಪಶುಸಂಗೋಪನೆ ಇಲಾಖೆ ಈ ರೋಗಕ್ಕೆ ಕಡಿವಾಣ ಹಾಕಲು ಎಲ್ಲಾ ರೀತಿಯ ಪ್ರಯತ್ನ ನಡೆಸಿದೆ.