ವಿಜಯಪುರ: ಜಾನಪದ ಕಲೆಗಳು ನಮ್ಮ ನಾಡು ನುಡಿ ಸಂಸ್ಕೃತಿ ಬೆಳೆಸುತ್ತವೆ, ಅವುಗಳನ್ನು ಅರಿತರೆ ನಾವು ನಾಡಿನ ಪ್ರಜೆಗಳಾಗಲು ಸಾಧ್ಯವೆಂದು ಜಿಲ್ಲಾ ಪಂಚಾಯತ್ ಸಿಇಓ ಗೋವಿಂದ ರೆಡ್ಡಿ ಹೇಳಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಸ್ಟೇಷನ್ ರಸ್ತೆಯಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಮತ್ತು ನಂತರ ಬಾಲಕಿಯರ ವಸತಿ ನಿಲಯ ಆವರಣದಲ್ಲಿ ಹಮ್ಮಿಕೊಳ್ಳಾಗಿದ್ದ ಮಹಿಳಾ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಲೆ ಮತ್ತು ಸಂಸ್ಕೃತಿ ಇತಿಹಾಸದ ಒಂದು ಭಾಗವಾಗಿವೆ. ಅವುಗಳು ತಲತಲಾಂತರಗಳಿಂದ ಬೆಳೆದು ಬಂದಿವೆ. ಮಹಿಳೆಯರಿಗೆ ಕರ್ನಾಟಕದಲ್ಲಿ ಉದ್ಯೋಗ ಕ್ಷೇತದಲ್ಲಿ ಮೀಸಲಾತಿ ಉತ್ತಮವಾಗಿದೆ. ನೀವು ವ್ಯಾಸಂಗ ಮಾಡಿ ಉನ್ನತ ಹುದ್ದೆ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸುವ ಕಾರ್ಯ ಮಾಡಬೇಕು ಎಂದು ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಕಿವಿ ಮಾತು ಹೇಳಿದರು.
ಜಾನಪದ ವಾಧ್ಯಗಳನ್ನು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ವಿವಿಧ ಜಿಲ್ಲೆಗಳಿಂದ ಆಗಮಿಸಿ ವಿದ್ಯಾರ್ಥಿನಿಯರು ಹಾಗೂ ಕಲಾವಿದರಿಂದ ಡೊಳ್ಳಿನ ಗಾಯನ, ಜೋಗುಳ ಪದ, ಭರತ ನಾಟ್ಯ, ಸುಗಮ ಸಂಗೀತ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಚಿಕ್ಕಮಗಳೂರು ಜಿಲ್ಲೆಯ ಪಲ್ಲವಿ ಹಾಗೂ ಸಂಗಡಿಗರ ವೀರಗಾಸೆ ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಜಲಜಮಿತ್ರ ಕಲಾ ವೇದಿಕೆ ವಿಜಯಪುರ ನಡೆಸಿಕೊಟ್ಟ "ಸಾವಿಲ್ಲದ ಮನೆ ಸಾಸುವೆ" ಮಕ್ಕಳ ನಾಟಕ ಪ್ರದರ್ಶನ ಪ್ರೇಕ್ಷಕರನ್ನು ಭಾವುಕರನ್ನಾಗಿಸಿತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕ ಮಹೇಶ ಪೋತದಾರ ಹಾಗೂ ಜಿಲ್ಲೆಯ ವಸತಿ ನಿಲಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.