ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಶಯಕ್ಕೆ ಮಹಾರಾಷ್ಟ್ರದಿಂದ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಕಾರಣ ಜಲಾಶಯದ ಹೊರಹರಿವು ಸಹ ಹೆಚ್ಚಳ ಮಾಡಲಾಗಿದೆ. ಶನಿವಾರ 21,130 ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದ್ದು, ಆಲಮಟ್ಟಿಯ ವಿದ್ಯುತ್ ಉತ್ಪಾದನೆಯ 5 ಘಟಕಗಳು ಕಾರ್ಯಾ ಆರಂಭಿಸಿವೆ.
ಶುಕ್ರವಾರ ಗರಿಷ್ಠ ಮಟ್ಟ 517.0 ಮೀಟರ್ ದಾಖಲಾಗಿತ್ತು. 72,030 ಕ್ಯೂಸೆಕ್ ನೀರು ಜಲಾಶಯಕ್ಕೆ ಒಳಹರಿವಿತ್ತು. 16,545 ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರಬಿಡಲಾಗಿತ್ತು. ಒಟ್ಟು ಜಲಾಶಯದಲ್ಲಿ 84.464 ಟಿಎಂಸಿ ನೀರು ಸಂಗ್ರಹವಾಗಿತ್ತು. ಶನಿವಾರ ಮಹಾರಾಷ್ಟ್ರದಿಂದ ಮತ್ತಷ್ಟು ಹೆಚ್ಚುವರಿ ನೀರು ಜಲಾಶಯಕ್ಕೆ ಹರಿದು ಬಂದ ಪರಿಣಾಮ ಒಳಹರಿವು 73,791 ಕ್ಯೂಸೆಕ್ಗೆ ಏರಿಕೆ ಕಂಡಿದೆ. 21,130 ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರ ಬಿಡಲಾಗಿದೆ. ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ 123.081 ಟಿಎಂಸಿ ಇದ್ದು, ಇಂದು 89.013 ಟಿಎಂಸಿ ನೀರು ಸಂಗ್ರಹವಾಗಿದೆ. ಇದೇ ರಭಸದಲ್ಲಿ ನೀರಿನ ಒಳಹರಿವು ಇದ್ದರೆ ಶೀಘ್ರ ಜಲಾಶಯ ಭರ್ತಿಯಾಗಲಿದೆ.
ಹೊರ ಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ವಿದ್ಯುತ್ ಉತ್ಪಾದನೆ ಕೇಂದ್ರದ ಐದು ಘಟಕಗಳು ಕಾರ್ಯಾರಂಭಗೊಂಡಿದ್ದು, ಕನಿಷ್ಠ 150 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಶುಕ್ರವಾರ 6.22 ಟಿಎಂಸಿ ಅಡಿ ನೀರು ಹರಿದು ಬಂದರೆ, ಶನಿವಾರ. 4.549 ಟಿಎಂಸಿ ಅಡಿಯಷ್ಟು ನೀರು ಹರಿದು ಬಂದಿದೆ.