ವಿಜಯಪುರ: ಕೇಂದ್ರದಲ್ಲಿ ನಮ್ಮ ಸರ್ಕಾರವಿದ್ದರೂ ಮಧ್ಯಂತರ ಆದೇಶ ಬಳಸಲು ಗೋವಾ ಸರ್ಕಾರ ತಡೆ ಒಡ್ಡುತ್ತಿದೆ. ನೀರನ್ನು ಭಾವನಾತ್ಮಕ ವಿಷಯವಾಗಿ ಮಾಡಿಕೊಳ್ಳುತ್ತಿರೋದು ದುರ್ದೈವ ಎಂದು ಸಚಿವ ಸಿ ಟಿ ರವಿ ಕಳವಳ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರದಲ್ಲಿ ನೀರು ಹಂಚಿಕೆ ಕುರಿತು ಯೋಜನೆ ರೂಪಿಸಿಲ್ಲ. ಹೀಗಾಗಿ ಗಡಿ,ಭಾಷೆ,ನೀರು ಭಾವನಾತ್ಮಕ ವಿಷಯವಾಗಿದೆ. ನೀರಿನ ಹಂಚಿಕೆ ಬಗ್ಗೆ ಸಮಗ್ರವಾಗಿ ಯೋಚಿಸಿ ಅದನ್ನ ರಾಷ್ಟ್ರೀಕರಣ ಮಾಡಬೇಕು. ನಾವು ನೀರಿನ ವಿಷಯದಲ್ಲಿ ಸಮಗ್ರ ಯೋಜನೆ ರೂಪಿಸಿ ಹಂಚಿಕೆ ಮಾಡಿದ್ರೆ ಮಹದಾಯಿಗಾಗಿ ಗುದ್ದಾಡುವ ಸಮಸ್ಯೆ ತಪ್ಪುತ್ತೆ. ಆಗ ಮಾತ್ರ ಸಮನಾಗಿ ನೀರು ಹಂಚಿಕೆಯಾಗುತ್ತದೆ. ಈ ಜಗಳ ಹುಟ್ಟಿಸಲು ಕಾರಣವಾದ ಕಾಂಗ್ರೆಸ್ ನೀತಿ ಬದಲಾಯಿಸಬಹುದೆಂದು ಅಭಿಪ್ರಾಯಪಟ್ಟರು.
ನೆರೆಯ ರಾಜ್ಯದ ಜನರು ನಮಗೆ ಸಹೋದರರಿದ್ದಂತೆ, ಹಾಗೇ ರಾಜ್ಯಗಳು ಸಹ. ನೀರು ಕೊಡುವುದು ತೆಗೆದುಕೊಳ್ಳುವುದು ಸಾಮಾನ್ಯ. ನಾವು ಅವರಿಗೆ ನೀರು ಕೊಡಬೇಕು, ಅವರು ನಮಗೆ ನೀರು ಕೊಡಬೇಕು, ಅವರು ಬೇಸಿಗೆಯಲ್ಲಿ ಕೋಯ್ನಾದಿಂದ ಬೆಳಗಾವಿ, ಬಾಗಲಕೋಟೆ ಭಾಗಗಳಿಗೆ ನೀರು ನೀಡಿದರೆ. ನಾವು ಮಹಾರಾಷ್ಟ್ರ ಜತ್ತ ಭಾಗಕ್ಕೆ ನೀರಿನ್ನು ಹರಿಸುತ್ತೇವೆ. ಭಾರತೀಯ ಜನತಾ ಪಾರ್ಟಿ ಕರ್ನಾಟಕದ ಹಿತಾಸಕ್ತಿ ಜೊತೆಗೆ ದೇಶದ ಹಿತಾಸಕ್ತಿ ಕಾಪಾಡುತ್ತದೆ ಎಂದರು.
ಇನ್ನು, ಮಹಾರಾಷ್ಟ್ರ ಚುನಾವಣಾ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಸಿ ಟಿ ರವಿ, ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರದಲ್ಲಿ ಈಗಾಗಲೇ ಹತಾಶೆಗೊಂಡಿದೆ. ಚುನಾವಣೆ ಮೊದಲೇ ಶಸ್ತ್ರ ತ್ಯಾಗ ಮಾಡಿದ್ದು, ಜಿಜೆಪಿ ಶಿವಸೇನೆ ಪಕ್ಷ ಅತಿ ಹೆಚ್ಚಿನ ಸ್ಥಾನ ಪಡೆಯಲಿದೆ. ಕಾಂಗ್ರೆಸ್ ಪಕ್ಷ 2ನೇ ಸ್ಥಾನಕ್ಕೂ ಬರುವುದಿಲ್ಲ ಎಂದು ಅಲ್ಲಿಗೆ ಹೋಗಿ ಬಂದವರು ಹೇಳುತ್ತಿದ್ದಾರೆ ಎಂದರು.
ಎನ್‌ಸಿಪಿಗಿಂತ ಕಡಿಮೆ ಸೀಟುಗಳು ಕಾಂಗ್ರೆಸ್‌ಗೆ ಬಂದರೂ ಆಶ್ಚರ್ಯ ಇಲ್ಲ ಎನ್ನುತ್ತಿದ್ದಾರೆ. ಗಾಂಧೀಜಿಯವರು ಕಾಂಗ್ರೆಸ್‌ನ ವಿಸರ್ಜನೆ ಮಾಡಿ ಎಂದು ಹೇಳಿದ್ದರು. ಆದರೆ, ಅವರ ಮಾತನ್ನ ಗಾಂಧೀಜಿಯವರ ರಾಜಕೀಯ ವಾರಸದಾರರು ಕೇಳಲಿಲ್ಲ. ಜನರು ಮಹಾತ್ಮಾ ಗಾಂಧಿಯವರ ಮಾತನ್ನ ಈಡೇರಿಸುವ ಕೆಲಸವನ್ನ ಒಂದೊಂದೆ ರಾಜ್ಯದಲ್ಲಿ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.