ಮುದ್ದೇಬಿಹಾಳ(ವಿಜಯಪುರ): ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಬಿರುಸಿನ ಮತದಾನ ನಡೆದಿದ್ದು, ಮುದ್ದೇಬಿಹಾಳದಲ್ಲಿ ಮತದಾನ ಕೇಂದ್ರಕ್ಕೆ ವಿಕಲಚೇತನ ಮಹಿಳೆಯೊಬ್ಬರು ಕಟ್ಟಪಟ್ಟು ಬಂದು ಮತದಾನ (Voting by a disability woman)ಮಾಡಿದರು.
ತಾಲೂಕಿನ ನಾಲತವಾಡದ ವಿಕಲಚೇತನ ಮಹಿಳೆ ಅನ್ನಪೂರ್ಣ ಅವರನ್ನು ತಹಶೀಲ್ದಾರ್ ಕಚೇರಿಯ ಮೂರನೇ ಮಹಡಿಯಲ್ಲಿದ್ದ ಮತಕೇಂದ್ರಕ್ಕೆ ಕರೆದೊಯ್ಯುವುದು ಸವಾಲಿನ ಕೆಲಸವಾಗಿತ್ತು. ಈ ವೇಳೆ ಸ್ಥಳದಲ್ಲಿದ್ದ ಶರಣು ಬೂದಿಹಾಳಮಠ ಫೌಂಡೇಶನ್ ಸಂಚಾಲಕ ಮಹಾಂತೇಶ ಬೂದಿಹಾಳಮಠ, ನಾಲತವಾಡದ ವೀರೇಶ ಹಿರೇಮಠ, ಶಿಕ್ಷಕ ಎಲ್.ಎಂ. ಜೋಗಿ ಸೇರಿದಂತೆ ಮೊದಲಾದವರು ಅನ್ನಪೂರ್ಣ ಅವರನ್ನು ಖುರ್ಚಿ ಮೇಲೆ ಕೂರಿಸಿಕೊಂಡು ಮತದಾನ ಕೇಂದ್ರಕ್ಕೆ ಕರೆತಂದರು.
ಮತ ಚಲಾಯಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅನ್ನಪೂರ್ಣ, ಇದೇ ಮೊದಲ ಬಾರಿಗೆ ನಾನು ಮತ ಚಲಾಯಿಸಿದ್ದೇನೆ. ತಾಲೂಕಾಡಳಿತ ಕನಿಷ್ಠ ವ್ಹೀಲ್ಚೇರ್ ವ್ಯವಸ್ಥೆಯನ್ನು ಮಾಡಬೇಕಿತ್ತು. ಮತಕೇಂದ್ರ ಮೂರನೇ ಮಹಡಿಯಲ್ಲಿ ಇದ್ದುದರಿಂದ ಕಷ್ಟಪಡಬೇಕಾಯಿತು ಎಂದರು.
ಕೊಪ್ಪಳದ ಕುಷ್ಟಗಿಯಲ್ಲಿ ಮತದಾನ ಮಂದಗತಿ
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮತಕೇಂದ್ರದಲ್ಲಿ ಮಳೆಯ ಕಾರಣ ಆರಂಭದಲ್ಲಿ ಮತದಾನ ಮಂದಗತಿಯಲ್ಲಿ ಸಾಗಿತು. ಬಳಿಕ ಸದಸ್ಯರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
ಬೆಳಗ್ಗೆ ಮದ್ದಾನಿಮಠದ ಕರಿಬಸವ ಶಿವಾಚಾರ್ಯ ಸ್ವಾಮೀಜಿ, ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಮಾಜಿ ಶಾಸಕ ಕೆ.ಶರಣಪ್ಪ ಮತ ಚಲಾಯಿಸಿದರು.
ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೇಖರಗೌಡ ಮಾಲಿಪಾಟೀಲ, ಮಹೇಶ ಜೋಷಿ, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಶರಣಗೌಡ ಪೊಲೀಸ್ ಪಾಟೀಲ, ವೀರಪ್ಪ ನಿಂಗೋಜಿ ಅವರ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಸಂಜೆಯ ವೇಳೆಗೆ ಫಲಿತಾಂಶ ಹೊರಬೀಳಲಿದೆ.