ವಿಜಯಪುರ: ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಮೃತ ಯುವಕರನ್ನು ವಿಜಯಪುರ ವಜ್ರಹನುಮಾನ ನಗರದ ನಿವಾಸಿಗಳಾದ ಶಿವಾನಂದ ಚೌಧರಿ (25), ಸುನೀಲ ಖಾನಾಪೂರ (26), ಈರಣ್ಣ ಕೋಲಾರ (26) ಮತ್ತು ಪ್ರವೀಣ ಪಾಟೀಲ್ (30) ಎಂದು ಗುರುತಿಸಲಾಗಿದೆ.
ರಾತ್ರಿ 10 ಗಂಟೆಯ ಸುಮಾರಿಗೆ ನಾಲ್ವರು ಸ್ನೇಹಿತರು ಸೇರಿ ಊಟಕ್ಕೆ ಹೊರಗಡೆ ಹೋಗಿದ್ದಾರೆ. ಊಟ ಮುಗಿಸಿಕೊಂಡು ರಾಷ್ಟ್ರೀಯ ಹೆದ್ದಾರಿ 50ರಲ್ಲಿನ ಟೋಲ್ಗೇಟ್ ಹತ್ತಿರದ ಟ್ರಕ್ ಬೇ ಬಳಿ ಇರುವ ಡಿವೈಡರ್ ಮೇಲೆ ಯುವಕರು ಕುಳಿತಿದ್ದರು. ಈ ವೇಳೆ ಜವರಾಯನ ರೂಪದಲ್ಲಿ ಬಂದ ಲಾರಿ ಯುವಕರ ಮೇಲೆ ಹರಿದಿದೆ. ತಕ್ಷಣವೇ ಸ್ಥಳೀಯರು ಅಂಬ್ಯುಲೆನ್ಸ್ ಕರೆ ಮಾಡಿ ತೀವ್ರವಾಗಿ ಗಾಯಗೊಂಡ ಯುವಕರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ಮುಂದಾಗಿದ್ದರು. ಆದ್ರೆ ಯುವಕರು ಗಂಭೀರವಾಗಿ ಗಾಯಗೊಂಡ ಹಿನ್ನೆಲೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ಚಾಲಕ ಲಾರಿಯೊಂದಿಗೆ ಪರಾರಿಯಾಗಿದ್ದಾನೆ. ಇನ್ನು, ಈ ಘಟನೆಯಲ್ಲಿ ಯುವಕರಿಗೆ ಸೇರಿದ ಬೈಕ್ಗಳು ಸಂಪೂರ್ಣ ನುಜ್ಜುಗುಜ್ಜಾಗಿವೆ.
ಸುದ್ದಿ ತಿಳಿದಾಕ್ಷಣ ಘಟನಾ ಸ್ಥಳಕ್ಕೆ ಡಿವೈಎಸ್ಪಿ ಗಿರಿಮಲ್ಲ ತಳಕಟ್ಟಿ ಸೇರಿದಂತೆ ಮೊದಲಾದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪ್ರೆಗೆ ರವಾನಿಸಿದರು. ಬದುಕಿ ಬಾಳಿ ಸುಂದರ ಭವಿಷ್ಯದ ಕನಸು ಕಟ್ಟಿಕೊಂಡಿದ್ದ ನಾಲ್ವರು ಸ್ನೇಹಿತರು ದಾರುಣ ಅಂತ್ಯ ಕಂಡಿರುವುದರಿಂದ ಕುಟುಂಬಸ್ಥರು ಮತ್ತು ಸಂಬಂಧಿಕರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.
ಓದಿ: ಹಳಿ ತಪ್ಪಿದ ಕಾರಟಗಿ - ಯಶವಂತಪುರ ರೈಲು: ಗಂಗಾವತಿ-ಕಾರಟಗಿ ನಡುವೆ ಸಂಚರಿಸುವ ರೈಲುಗಳ ಭಾಗಶಃ ರದ್ದು
ಇತ್ತೀಚಿನ ಘಟನೆ- ನೇತ್ರಾವತಿ ಸೇತುವೆಯಲ್ಲಿ ಸರಣಿ ಅಪಘಾತ: ಸೇತುವೆ ಮೇಲೆ ಲಾರಿಯೊಂದು ಕೆಟ್ಟು ನಿಂತ ಪರಿಣಾಮ ಸರಣಿ ಅಪಘಾತ ಸಂಭವಿಸಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲದ ನೇತ್ರಾವತಿ ನದಿಯ ಹೊಸ ಸೇತುವೆಯಲ್ಲಿ ಸೋಮವಾರ ಸಂಜೆ ಸಂಭವಿಸಿತ್ತು. ಒಟ್ಟು ಆರು ವಾಹನಗಳು ಹಿಂಬದಿಯಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ವಾಹನದಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದ ಲಾರಿ ಸೇತುವೆ ಮಧ್ಯ ಭಾಗದಲ್ಲಿ ಕೆಟ್ಟು ನಿಂತಿತ್ತು. ಇದೇ ಸಂದರ್ಭದಲ್ಲಿ ಭಾರಿ ಮಳೆ ಆರಂಭವಾಗಿತ್ತು. ಈ ವೇಳೆ ಅತಿವೇಗದಿಂದ ಬಂದ ಕಾರೊಂದು ನಿಯಂತ್ರಣ ಕಳೆದುಕೊಂಡು ಲಾರಿ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಬಳಿಕ ಒಂದರ ಹಿಂದೆ ಒಂದರಂತೆ ಡಿಕ್ಕಿ ಹೊಡೆದಿದ್ದವು.
ಘಟನೆಯಲ್ಲಿ ಕೆಲವರಿಗೆ ಅಲ್ಪ ಸ್ವಲ್ಪ ಗಾಯಗಳಾಗಿವೆ. ಸರಣಿ ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎರಡು ಗಂಟೆಗಳ ಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು.