ವಿಜಯಪುರ: ಜಿಲ್ಲೆಯಲ್ಲಿ ಮತ್ತೊಂದು ಬ್ಯಾಂಕ್ ಎಟಿಎಂ ದರೋಡೆ ನಡೆಸಲು ವಿಫಲ ಯತ್ನ ನಡೆದಿರುವ ಘಟನೆ ಮುದ್ದೇಬಿಹಾಳದ ತಂಗಡಗಿ ರಸ್ತೆಯ ಯೂನಿಯನ್ ಬ್ಯಾಂಕ್ ಆವರಣದಲ್ಲಿ ತಡರಾತ್ರಿ ನಡೆದಿದೆ.
ಮುದ್ದೇಬಿಹಾಳ ಪಟ್ಟಣದ ಯೂನಿಯನ್ ಬ್ಯಾಂಕ್ ಎಟಿಎಂಗೆ ನುಗ್ಗಿರುವ ದರೋಡೆಕೋರರು ಎಟಿಎಂನಲ್ಲಿದ್ದ ಸಿಸಿಟಿವಿ ಕ್ಯಾಮರಾ ವೈಯರ್ ಕತ್ತರಿಸಿದ್ದಾರೆ. ನಂತರ ಎಟಿಎಂ ಒಡೆಯಲು ಪ್ರಯತ್ನಿಸಿದ್ದಾರೆ. ಅದು ಸಾಧ್ಯವಾಗದ ಕಾರಣ ಬಂದ ದಾರಿಗೆ ಸುಂಕವಿಲ್ಲವೆಂದು ವಾಪಸಾಗಿದ್ದಾರೆ.
ನಸುಕಿನ ಜಾವ ಎಟಿಎಂ ದರೋಡೆ ನಡೆಸಿರುವ ಮಾಹಿತಿ ಸಾರ್ವಜನಿಕರಿಗೆ ಗೊತ್ತಾಗಿದೆ. ಸ್ಥಳಕ್ಕೆ ಪಿಎಸ್ಐ ಮಲ್ಲಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದರೋಡೆಕೋರರು ಎಟಿಎಂ ಒಡೆಯಲು ಹಲವು ರೀತಿ ಪ್ರಯತ್ನ ನಡೆಸಿರುವುದು ಘಟನಾ ಸ್ಥಳದಲ್ಲಿ ಸಿಕ್ಕ ವಸ್ತುಗಳಿಂದ ತಿಳಿದು ಬಂದಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿನ್ನೆಯಷ್ಟೇ ಸಿಂದಗಿ ಪಟ್ಟಣದಲ್ಲಿ ಬ್ಯಾಂಕ್ ಎಟಿಎಂ ಕದಿಯಲು ಯತ್ನಿಸಿದ್ದ ದರೋಡೆಕೋರರು ಸೆಕ್ಯುರಿಟಿ ಗಾರ್ಡ್ ಹತ್ಯೆ ನಡೆಸಿ ಪರಾರಿಯಾಗಿದ್ದರು. ಅದರ ಮರು ದಿನವೇ ಈ ಘಟನೆ ನಡೆದಿರುವುದು ವ್ಯವಸ್ಥಿತ ತಂಡವೊಂದು ಎಟಿಎಂ ದರೋಡೆ ನಡೆಸುತ್ತಿರುವ ಸಂಶಯ ಪೊಲೀಸರಿಂದ ವ್ಯಕ್ತವಾಗಿದೆ.