ವಿಜಯಪುರ: ರಷ್ಯಾ ಮತ್ತು ಉಕ್ರೇನ್ ದೇಶಗಳ ಮಧ್ಯೆ ನಡೆಯುತ್ತಿರುವ ಯುದ್ಧ 12ನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ ಉಕ್ರೇನ್ನಲ್ಲಿ ಸಿಲುಕಿದ್ದ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ತಮದಡ್ಡಿ ಗ್ರಾಮದ ಸುಚಿತ್ರಾ ಮಲ್ಲನಗೌಡ ಕವಡಿಮಟ್ಟಿ ಎಂಬ ವಿದ್ಯಾರ್ಥಿನಿ ಇಂದು ಜಿಲ್ಲೆಗೆ ವಾಪಸ್ ಆಗಿದ್ದು, ಪೋಷಕರು ಸಂತಸ ವ್ಯಕ್ತಪಡಿಸಿದರು.
ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ತಮದಡ್ಡಿ ಗ್ರಾಮದ ಸುಚಿತ್ರಾ ಮಲ್ಲನಗೌಡ ಕವಡಿಮಟ್ಟಿ ಎಂಬ ವಿದ್ಯಾರ್ಥಿನಿ ಉಕ್ರೇನ್ ದೇಶದ ಖಾರ್ಕಿವ್ ಮೆಡಿಕಲ್ ಕಾಲೇಜ್ನಲ್ಲಿ ಎಂಬಿಬಿಎಸ್ 2ನೇ ಸೆಮಿಸ್ಟರ್ ಓದುತ್ತಿದ್ದು, ಯುದ್ಧ ಆರಂಭಗೊಂಡು ಒಂದು ವಾರದ ನಂತರ ಭಾರತೀಯ ರಾಯಭಾರಿ ಕಚೇರಿ ಹಾಗೂ ವಿಜಯಪುರ ಜಿಲ್ಲಾಡಳಿತ ಸಹಾಯ ಪಡೆದು ಇಂದು ವಿಜಯಪುರಕ್ಕೆ ವಾಪಸ್ ಬಂದಿದ್ದಾಳೆ. ಮಗಳು ಮನೆಗೆ ಬರುತ್ತಿದ್ದಂತೆ ಆರತಿ ಬೆಳಗಿ ಸಿಹಿ ತಿಂಡಿ ತಿನ್ನಿಸುವ ಮೂಲಕ ಪೋಷಕರು ಬರಮಾಡಿಕೊಂಡರು.
ಯುದ್ಧದ ಭೀಕರತೆ ಕುರಿತು ಈಟಿವಿ ಭಾರತ ಜೊತೆ ಅಭಿಪ್ರಾಯ ಹಂಚಿಕೊಂಡ ಸುಚಿತ್ರಾ, ಯುದ್ಧ ಆರಂಭಗೊಂಡ ನಂತರ ಅಪಾರ್ಟ್‌ಮೆಂಟ್ ಬಿಟ್ಟು ಬಂಕರ್ನಲ್ಲಿ ಕಾಲ ಕಳೆಯಬೇಕಾಯಿತು. ಅಲ್ಲಿ ಸರಿಯಾಗಿ ಊಟ, ನೀರು ಸಿಗುತ್ತಿರಲಿಲ್ಲ, ಉಕ್ರೇನ್ನಲ್ಲಿ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿತ್ತು.
ನವೀನ್ ಯುದ್ಧದಲ್ಲಿ ಸಾವನ್ನಪ್ಪಿದ ಮೇಲೆ ನಮಗೂ ಜೀವ ಭಯ ಕಾಡತೊಡಗಿತ್ತು. ಹೀಗಾಗಿ, ಬಂಕರ್ಗಳನ್ನ ಬಿಟ್ಟು ನಡೆದುಕೊಂಡು ಬಂದು ಪೋಲೆಂಡ್ಗೆ ರೈಲು ಮೂಲಕ ಆಗಮಿಸಿ ಅಲ್ಲಿಂದ ವಿಮಾನ ಮೂಲಕ ದೆಹಲಿ ಬಂದೆ. ವಿಜಯಪುರಕ್ಕೆ ಸುರಕ್ಷಿತವಾಗಿ ಬರಲು ಭಾರತೀಯ ರಾಯಭಾರಿ ಸಿಬ್ಬಂದಿ ಎಲ್ಲ ರೀತಿಯ ಸಹಾಯ, ಸಹಕಾರ ನೀಡಿದ್ದಾರೆ ಎಂದರು.
ಇದನ್ನೂ ಓದಿ: 'ನಮಾಮಿ ಗಂಗೆ'ಗೆ ಇದುವರೆಗೆ ಎಷ್ಟು ಕೋಟಿ ಖರ್ಚು ಮಾಡಲಾಗಿದೆ ಗೊತ್ತಾ?
ಇದೇ ವೇಳೆ ಮಾತನಾಡಿದ ಸುಚಿತ್ರಾ ತಂದೆ ಮಲ್ಲನಗೌಡ ಕವಡಿಮಟ್ಟಿ, ಉಕ್ರೇನ್ನಲ್ಲಿ ಯುದ್ಧ ಆರಂಭವಾದ ವೇಳೆ ಸಾಕಷ್ಟು ಆತಂಕ ಎದುರಾಗಿತ್ತು. ಭಾರತೀಯ ರಾಯಭಾರಿ ಹಾಗೂ ವಿಜಯಪುರ ಜಿಲ್ಲಾಡಳಿತ ಎಲ್ಲ ರೀತಿಯ ಸಹಕಾರ ನೀಡಿದರು. ಉಳಿದ ವಿದ್ಯಾರ್ಥಿಗಳನ್ನು ಕರೆ ತರಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: 12ನೇ ದಿನಕ್ಕೆ ಕಾಲಿಟ್ಟ ಉಕ್ರೇನ್ - ರಷ್ಯಾ ಯುದ್ಧ