ವಿಜಯಪುರ: ಪಿಎಂಇಜಿಪಿ ಸಾಲ ಮಂಜೂರಾತಿಯಲ್ಲಿ ಜಿಲ್ಲೆಯು ಕಳೆದ ವರ್ಷ 4ನೇ ಸ್ಥಾನದಲ್ಲಿದ್ದು, ಈ ಬಾರಿ ದ್ವಿತೀಯ ಸ್ಥಾನದಲ್ಲಿ ಗುರುತಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.
ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಅಗ್ರಣೀಯ ಸಿಂಡಿಕೇಟ್ ಬ್ಯಾಂಕ್ ಇವರ ಸಂಯುಕ್ತಾಶ್ರಯದಲ್ಲಿ ಪ್ರಧಾನಮಂತ್ರಿ-ಮುಖ್ಯಮಂತ್ರಿಗಳ ಉದ್ಯೋಗ ಸೃಜನಾ ಯೋಜನೆಗಳನ್ನು ಆನ್‍ಲೈನ್ ಮೂಲಕ ಅನುಷ್ಠಾನಗೊಳಿಸುವ ತಂತ್ರಾಂಶದ ಬಗ್ಗೆ ವಿಜಯಪುರ ಜಿಲ್ಲಾ ವ್ಯಾಪ್ತಿಯ ಎಲ್ಲಾ ಬ್ಯಾಂಕಿನ ಅಧಿಕಾರಿಗಳಿಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಅರಿವು ಕಾರ್ಯಕ್ರಮ ಉದ್ಘಾಟಿಸಿ ವೈ.ಎಸ್.ಪಾಟೀಲ ಮಾತನಾಡಿದರು.
ಸಾಲಗಳ ಮಂಜೂರಾತಿಯಲ್ಲಿ ಬ್ಯಾಂಕಿನ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿರುತ್ತದೆ. ಯಾವುದೇ ಕಾರಣಕ್ಕೂ ನಿಗದಿತ ಅವಧಿ ಮೀರದೆ, ಸಾಲಗಳ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳದೇ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಸಾಲಗಳ ಮಂಜೂರಾತಿಯಲ್ಲಿ ಗ್ರಾಹಕರ ಸ್ಥಿತಿ, ಸಾಲದ ಪ್ರಕಾರ ಹಾಗೂ ಸಾಲ ನೀಡುವ ಮೊತ್ತಗಳನ್ನು ಪರಿಗಣಿಸಿ ಸಾಲ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು. ಸ್ವಯಂ ಉದ್ಯೋಗ ಸೃಷ್ಟಿಸುವುದೇ ಪ್ರಧಾನಮಂತ್ರಿ-ಮುಖ್ಯಮಂತ್ರಿಗಳ ಉದ್ಯೋಗ ಸೃಜನಾ ಯೋಜನೆ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗುವಂತೆ ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿ, ಅತ್ಯಧಿಕ ಸಾಲಗಳ ಮಂಜೂರಾತಿ ಮಾಡಿ ರಾಜ್ಯದಲ್ಲಿ ಒಂದನೇ ಸ್ಥಾನದಲ್ಲಿ ವಿಜಯಪುರ ಜಿಲ್ಲೆ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಸಾಲದ ಅರ್ಜಿಗಳನ್ನು ಸರಿಯಾಗಿ ಪರೀಕ್ಷಿಸಿ ನಿಗದಿತ ಅವಧಿಯಲ್ಲಿ ಸಾಲಗಳನ್ನು ಮಂಜೂರು ಮಾಡಬೇಕು. ಸಾಲ ವಸೂಲಾತಿಯಲ್ಲಿಯೂ ಜಿಲ್ಲಾಡಳಿತ ಬ್ಯಾಂಕ್‍ಗಳಿಗೆ ಸಹಕರಿಸಲಿದೆ ಎಂದು ಹೇಳಿದರು.
ಇನ್ನು ಸಿಂಡಿಕೇಟ್ ಬ್ಯಾಂಕ್ನ ಪ್ರಾದೇಶಿಕ ವ್ಯವಸ್ಥಾಪಕ ಪಿ.ಶ್ರೀಕಾಂತ ಮಾತನಾಡಿ, ಎಂ.ಎಸ್.ಎಂ.ಇ. ಘಟಕಗಳು ದೇಶದ ಜಿಡಿಪಿಯಲ್ಲಿ ಮಹತ್ವದ ಪಾತ್ರ ಹೊಂದಿದ್ದು, ಪಿಎಂಇಜಿಪಿ ಮತ್ತು ಸಿಎಂಇಜಿಪಿ ಯೋಜನೆಗಳು ಈ ಘಟಕಗಳಿಗೆ ಉತ್ತೇಜನ ನೀಡಿ ದೇಶದಲ್ಲಿ ಸ್ವಯಂ ಉದ್ಯೋಗ ಸೃಷ್ಟಿಸುವ ಮಹತ್ವದ ಪಾತ್ರ ಹೊಂದಿವೆ ಎಂದು ಹೇಳಿದರು.