ಮುದ್ದೇಬಿಹಾಳ (ವಿಜಯಪುರ) : ಅನಾರೋಗ್ಯದಿಂದ ಬಳಲುತ್ತಿದ್ದ ಹಸುಗೂಸನ್ನು ಹೊತ್ತುಕೊಂಡು ಬಂದಿದ್ದ ಬಾಣಂತಿಯೊಬ್ಬರು ತಡರಾತ್ರಿ ಬಸ್ ಸಿಗದೆ ಪರಾದಾಡುತ್ತಿದ್ದ ವೇಳೆ ಸಾರಿಗೆ ಘಟಕದ ಸಿಬ್ಬಂದಿ ಆಕೆಯನ್ನ ಮನೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.
ಸಾರಿಗೆ ಘಟಕದ ಚಾಲಕರೊಬ್ಬರು ತಮ್ಮ ಸೇವೆಯ ಅವಧಿ ಮುಗಿದಿದ್ದರೂ ಅವರನ್ನು ಅಧಿಕಾರಿಯ ಸೂಚನೆ ಮೇರೆಗೆ ಊರು ತಲುಪಿಸಿ ಮಾದರಿಯಾಗಿದ್ದಾರೆ. ನಾರಾಯಣಪೂರ ಮೂಲದ ಶಂಕ್ರಮ್ಮ ನಾಲತವಾಡ ಎಂಬುವರು ರಾತ್ರಿ 9.30ರ ಸುಮಾರಿಗೆ ಮುದ್ದೇಬಿಹಾಳ ಘಟಕದಿಂದ ನಾರಾಯಣಪುರಕ್ಕೆ ತೆರಳಲು ನಿಲ್ದಾಣಕೆ ಬಂದಿದ್ದರು. ಆದರೆ, ಊರಿಗಿದ್ದ ಕೊನೆಯ ಬಸ್ ಸಹ ಆಗಲೇ ಹೋಗಿತ್ತು. ಇದರಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಸುಗೂಸು ಹಿಡಿದು ಅಲ್ಲೇ ಉಳಿಯುವ ಸ್ಥಿತಿ ನಿರ್ಮಾಣವಾಗಿತ್ತು.
ಆದರೆ, ಈ ವಿಷಯ ತಿಳಿದ ಹಸಿರು ತೋರಣ ಬಳಗದ ಸದಸ್ಯ ಮಹಾಬಲೇಶ್ವರ ಗಡೇದ್ ಅವರು, ಘಟಕದ ವ್ಯವಸ್ಥಾಪಕ ರಾವಸಾಬ್ ಹೊನಸೂರೆ ಅವರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ತಕ್ಷಣವೇ ಹೊನಸೂರೆ ಮಹಿಳೆ ಜೊತೆ ಇದ್ದ ಇತರೆ ಪ್ರಯಾಣಿಕರನ್ನು ಅವರ ಊರಿಗೆ ಕಳುಹಿಸಲು ಮುಂದಾಗಿದ್ದಾರೆ.
ಅಲ್ಲೇ ರಾತ್ರಿ ಕರ್ತವ್ಯದಲ್ಲಿದ್ದ ನಿಯಂತ್ರಣಾಧಿಕಾರಿ ನಿಂಗಣ್ಣ ತಳವಾರ ಅವರಿಗೆ ಯಾವುದಾದರೂ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದ್ದಾರೆ. ಈ ವೇಳೆ ಬೇರೆ ಮಾರ್ಗಕ್ಕಾಗಿ ಸೇವೆಗೆ ನಿಯೋಜನೆಗೊಂಡಿದ್ದ ಚಾಲಕನಿಗೆ ಮನವಿ ಮಾಡಿ, ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಬಾಣಂತಿ ಜೊತೆಗಿದ್ದ ಇತರೆ 13 ಮಂದಿಯ ಬಸ್ ಟಿಕೆಟ್ ಅನ್ನೂ ಸಹ ಅಧಿಕಾರಿ ಹೊನಸೂರೆ ಅವರೇ ಪಡೆದು ಬಸ್ನಲ್ಲಿ ಊರು ತಲುಪಿಸಿದ್ದಾರೆ.
ವಸ್ತಿ ಬಸ್ಗಾಗಿ ಆಗ್ರಹ : ರಾತ್ರಿ 8.30ರ ನಂತರ ನಾಲತವಾಡ, ವೀರೇಶನಗರ, ನಾರಾಯಣಪೂರಕ್ಕೆ ಹೋಗುವವರಿಗೆ ಮೊದಲಿದ್ದ 9.30ರ ನಾರಾಯಣಪೂರ-ವಸ್ತಿ ಬಸ್ ಮತ್ತೆ ಆರಂಭಿಸಬೇಕು. ಇದರಿಂದ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಮುಗಿಸಿ ಊರಿಗೆ ಹೋಗುವವರಿಗೆ ಅನುಕೂಲವಾಗುತ್ತದೆ ಎಂದು ಪ್ರಯಾಣಿಕರು ಈ ವೇಳೆ ಮನವಿ ಮಾಡಿಕೊಂಡರು.