ಮುದ್ದೇಬಿಹಾಳ: ವಿದ್ಯುತ್ ಕಂಬಗಳನ್ನು ಸಾಗಣೆ ಮಾಡುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ ಕಾರ್ಮಿಕ ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ತಾಳಿಕೋಟಿ ಸಮೀಪದ ಮೂಕಿಹಾಳ ಬಳಿ ನಡೆದಿದೆ.
ತಾಲೂಕಿನ ವೀರೇಶನಗರದ ನೌಶಾದ ದಾವಲಸಾಬ ನದಾಫ್(22) ಮೃತ ಕೂಲಿ ಕಾರ್ಮಿಕ. ಆಸಿಫ ನದಾಫ(18), ಚಂದ್ರಶೇಖರ ಬರದೇನಾಳ(18), ವೀರೇಶ ಮೇಟಿ(18), ರಾಜು ಬರದೇನಾಳ(16) ಗಾಯಾಳುಗಳು. ಟ್ರ್ಯಾಕ್ಟರ್ ತಾಳಿಕೋಟಿ ಹೆಸ್ಕಾಂ ಕಚೇರಿಯಿಂದ ಕಂಬಗಳನ್ನು ಹೇರಿಕೊಂಡು ವೀರೇಶ ನಗರದತ್ತ ಹೊರಟಿತ್ತು. ಮೂಕಿಹಾಳ ಸಮೀಪದಲ್ಲಿ ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆ.
ಶಾಸಕ ನಡಹಳ್ಳಿ ಆಸ್ಪತ್ರೆಗೆ ಭೇಟಿ: ತಾಳಿಕೋಟಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಘಟನೆ ಕುರಿತು ತಿಳಿದು ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಕಾರ್ಮಿಕರ ಆರೋಗ್ಯ ವಿಚಾರಿಸಿದರು. ಇದೇ ವೇಳೆ, ಗಾಯಾಳುಗಳಿಗೆ ವೈಯಕ್ತಿಕ ಪರಿಹಾರಧನವನ್ನು ನೀಡಿದರು.
ಗಾಯಾಳುಗಳನ್ನು ಜೀಪಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದ ಸಿಪಿಐ : ಇನ್ನು ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಿಪಿಐ ಆನಂದ ವಾಘ್ಮೋಡೆ ಅವರು, ಆ್ಯಂಬುಲೆನ್ಸ್ ಬರುವುದಕ್ಕೆ ವಿಳಂಬವಾದ ಕಾರಣ ಗಾಯಾಳುಗಳನ್ನು ಹತ್ತಿರ ಸರಕಾರಿ ಆಸ್ಪತ್ರೆಗೆ ತಮ್ಮ ವಾಹನದಲ್ಲಿಯೇ ಕಳುಹಿಸಿ ಸಕಾಲಕ್ಕೆ ಚಿಕಿತ್ಸೆ ದೊರೆಯುವಂತೆ ನೋಡಿಕೊಂಡಿದ್ದಾರೆ. ಸಿಪಿಐ ಕಾರ್ಯವನ್ನು ಶಾಸಕರು ಶ್ಲಾಘಿಸಿದರು.
ಗುತ್ತಿಗೆದಾರರ ದುರುಪಯೋಗ : ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಎದುರಿಗೆ ಬಿಕ್ಕಿ ಬಿಕ್ಕಿ ಅತ್ತ ಗಾಯಾಳುಗಳ ಕುಟುಂಬಸ್ಥರು, ನಮ್ಮಂತ ಬಡವರನ್ನು ಗುತ್ತಿಗೆದಾರರ ಕಡೆಯವರು ದುರುಪಯೋಗಪಡಿಸಿಕೊಳ್ತಾರೆ ಎಂದು ದೂರಿದರು.