ವಿಜಯಪುರ: ತಾಲೂಕು ಪಂಚಾಯತ್ ಉಪಾಧ್ಯಕ್ಷ ಹಾಗೂ ಆತನ ಬೆಂಬಲಿಗರು ಮಹಿಳಾ ಗ್ರಾಮ ಪಂಚಾಯತ್ ಅಧ್ಯಕ್ಷರ ಮನೆಗೆ ನುಗ್ಗಿ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಬಸರಕೋಡ ಹಳ್ಳಿಯ ಗ್ರಾಮ ಪಂಚಾಯತ್ ಅಧ್ಯಕ್ಷೆಯಾದ ಸುನಂದಾ ಮಾದರ ಹಾಗೂ ಅವರ ಕುಟುಂಬಸ್ಥರ ಮೇಲೆ ಹಲ್ಲೆ ನಡೆದಿದೆ.
ಮುದ್ದೇಬಿಹಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ್ ಮತ್ತು ಸಹೋದರ ರವಿಗೌಡ ಪಾಟೀಲ್ ಗುಂಪು ಕಟ್ಟಿಕೊಂಡು ಹೋಗಿ ಸುನಂದಾರ ಮನೆ ಮುಂದೆ ಗಲಾಟೆ ಮಾಡಿದೆಯಂತೆ. ಅಷ್ಟೇ ಅಲ್ಲ, ಅವಾಚ್ಯ ಶಬ್ದಗಳಿಂದ ಸುನಂದಾರನ್ನ ನಿಂದಿಸಿ ಆವಾಜ್ ಹಾಕಿದ್ದಾರೆಂದು ಆರೋಪಿಸಲಾಗಿದೆ.
ಎಂಟತ್ತು ಜನರೊಂದಿಗೆ ತೆರಳಿ, ಏಕಾಏಕಿ ಹಲ್ಲೆ ಮಾಡಿದ್ದು, ಮನೆಯಲ್ಲಿದ್ದ ಮಕ್ಕಳ ಮೇಲೂ ದಬ್ಬಾಳಿಕೆ ಮಾಡಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಈ ಕುರಿತು ಯಾವುದೇ ದೂರನ್ನ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿಲ್ಲ.