ವಿಜಯಪುರ: ಔಷಧೀಯ ಸಸಿಗಳನ್ನು ಮಾರಾಟ ಮಾಡುವ ವ್ಯಾಪಾರಿಯೊಬ್ಬನಿಗೆ ನಾವು ಭೀಮತೀರದ ಹಂತಕ ಧರ್ಮರಾಜ್ ಚಡಚಣ ಸಂಬಂಧಿಕರೆಂದು ಹೇಳಿಕೊಂಡು, ಕೊಲೆ ಮಾಡುವುದಾಗಿ ಬೆದರಿಸಿ ಲಕ್ಷಾಂತರ ರೂ.ಗಳಿಗೆ ಬೇಡಿಕೆ ಇಟ್ಟಿದ್ದ ಮೂವರಿಗೆ ಗ್ರಾಮೀಣ ಪೊಲೀಸರು ಕೈಕೋಳ ತೊಡಿಸಿದ್ದಾರೆ.
ಬಂಧಿತರನ್ನು ಕನ್ನೂರ ಗ್ರಾಮದ ಮುರಿಗೆಪ್ಪ ಬೆಳ್ಳುಂಡಗಿ, ಬಸವರಾಜ ಬೆಳ್ಳುಂಡಗಿ ಹಾಗೂ ಮಕಣಾಪುರದ ದೇವೇಂದ್ರ ಒಡೆಯರು ಎಂದು ಗುರುತಿಸಲಾಗಿದೆ.
ಇವರು ವಿಜಯಪುರದ ಗಚ್ಚಿನಕಟ್ಟಿ ನಿವಾಸಿ ಅಪ್ಪಾಸಾಹೇಬ ಮಲ್ಲಿಕಾರ್ಜುನ ಬಗಡೆ ಎಂಬುವರಿಗೆ ಕರೆ ಮಾಡಿ, ತಮಗೆ ಔಷಧಿ ಸಸಿ ಬೇಕು ಎಂದು ಹೇಳಿದ್ದಾರೆ. ಬಳಿಕ ಶಿರನಾಳ-ಬಬಲೇಶ್ವರ ರಸ್ತೆಗೆ ವ್ಯಾಪಾರಿಯನ್ನು ಕರೆಯಿಸಿ, ಈ ವೇಳೆ ನಾವು ಭೀಮಾ ತೀರದ ಹಂತಕ ಧರ್ಮರಾಜ್ ಚಡಚಣ ಸಂಬಂಧಿಕರು ಎಂದು 1.20 ಲಕ್ಷ ರೂ. ಹಣದ ಬೇಡಿಕೆ ಇಟ್ಟು, ವ್ಯಾಪಾರಿಯಿಂದ 1.37 ಲಕ್ಷ ರೂ. ನಗದು ಹಾಗೂ ಒಂದು ಮೊಬೈಲ್ ಕಸಿದುಕೊಂಡು ಹೋಗಿದ್ದರು.
ಈ ಸಂಬಂಧ ವ್ಯಾಪಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಕಾರ್ಯಾಚರಣೆ ಆರಂಭಿಸಿದ ವಿಶೇಷ ಪೊಲೀಸ್ ತಂಡ, ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 1.37ಲಕ್ಷ ರೂ. ನಗದು, ಮೊಬೈಲ್ ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ.
ಇನ್ನು ವಿಶೇಷ ಪೊಲೀಸ್ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಎಸ್‌ಪಿ ಅನುಪಮ್ ಅಗರವಾಲ್ ಬಹುಮಾನ ಘೋಷಿಸಿದ್ದಾರೆ.