ವಿಜಯಪುರ: ಶುಕ್ರವಾರ ನಾಪತ್ತೆಯಾಗಿದ್ದ ಕಾರು ಚಾಲಕನ ಮೃತದೇಹ ಅರೆಬೆಂದ ಸ್ಥಿತಿಯಲ್ಲಿ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಂಬಾಗಿ ಬಳಿ ಪತ್ತೆಯಾಗಿದೆ.
ವಿಜಯಪುರ ಎಸ್ಪಿ ಕಚೇರಿ ಹಿಂಭಾಗದ ನಿವಾಸಿ ಅಕ್ಷಯ ಮನೋಹರ ಲವಗಿ(23) ಕೊಲೆಯಾದ ಚಾಲಕನಾಗಿದ್ದಾನೆ. ಕೊಲೆ ಮಾಡಿ ದುರ್ಷ್ಕಮಿಗಳು ಶವವನ್ನು ಸುಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ.
ಶುಕ್ರವಾರ ಮಧ್ಯಾಹ್ನ ಊಟದ ವೇಳೆ ಬೆಳಗಾವಿಗೆ ಕಾರು ಬಾಡಿಗೆ ಹೋಗುವುದಿದೆ. ಡೀಸೆಲ್ ಹಾಕಿಸಿಕೊಂಡು ಬರುತ್ತೇನೆ ಎಂದು ಎರಡು ಕ್ಯಾನ್ ಹಿಡಿದುಕೊಂಡು ಬೈಕ್ ನಲ್ಲಿ ಹೋಗಿದ್ದಾನೆ. ರಾತ್ರಿಯಾದರು ಬಾರದ ಕಾರಣ ಮನೆಯವರು ಎಲ್ಲ ಕಡೆ ಹುಡುಕಾಡಿದ್ದಾರೆ. ಶನಿವಾರ ಮಗನ ಕಾಣೆಯಾದ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಭಾನುವಾರ ಬಬಲೇಶ್ವರ ಪೊಲೀಸ್ ಠಾಣೆಯಿಂದ ಕರೆ ಬಂದಿದ್ದು, ನಿಮ್ಮ ಮಗನ ಬೈಕ್ ಸಿಕ್ಕಿದೆ ಎಂದು ವಾಟ್ಸ್ಆ್ಯಪ್ನಲ್ಲಿ ಬೈಕ್ ಫೋಟೋ ಕಳುಹಿಸಿದ್ದಾರೆ.
ತಕ್ಷಣ ಇದು ಅಕ್ಷಯ ಬೈಕ್ ಎಂದು ಗುರುತು ಹಿಡಿದ ಪೋಷಕರು ಬಬಲೇಶ್ವರ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಪೊಲೀಸರು ಅವರನ್ನು ಬಬಲೇಶ್ವರ ಸಮೀಪದ ಕಂಬಾಗಿ ಗ್ರಾಮದ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದಾಗ, ಅಲ್ಲಿ ಅಕ್ಷಯ ಬೈಕ್ ನೋಡಿ ಕುಟುಂಬಸ್ಥರು ಗಾಬರಿಯಾಗಿದ್ದಾರೆ. ನಂತರ ಅಲ್ಲಿಯೇ ಅಕ್ಷಯ ಶವವನ್ನು ಪೋಷಕರು ಗುರುತಿಸಿದ್ದಾರೆ. ಬೇರೆಯವರ ಕಾರು ಬಾಡಿಗೆಗೆ ಓಡಿಸುತ್ತಿದ್ದ ಮೃತ ಅಕ್ಷಯ ಬಾಡಿಗೆಗೆ ಹೋದರೆ ವಾರಗಟ್ಟಲೇ ಮನೆಗೆ ಬರುತ್ತಿರಲಿಲ್ಲ. ಬಂದ ಮೇಲೆ ತನ್ನ ಕೋಣೆಯಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದನು. ಅವನಿಗೆ ಯಾರ ಫೋನ್ ಕಾಲ್ ಬರುತ್ತೆ ಎನ್ನುವುದು ಪೋಷಕರಿಗೂ ತಿಳಿದಿರಲಿಲ್ಲ. ಅಕ್ಷಯ ತಂದೆ ಸಹ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದರು. ಈಗ ಅಕ್ಷಯ ಮೃತದೇಹ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಹಿನ್ನೆಲೆ:
ನಿನ್ನೆ ಕಂಬಾಗಿ ಬಳಿ ಅರೆಬೆಂದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಪಕ್ಕದಲ್ಲಿದ್ದ ಸ್ಕೂಟರ್ ಗುರುತು ಆಧರಿಸಿ ವ್ಯಕ್ತಿಯನ್ನ ಪತ್ತೆ ಮಾಡಲಾಗಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಯುವಕನನ್ನು ಕೊಲೆ ಮಾಡಿ ದುರ್ಷ್ಕಮಿಗಳು ಶವ ಸುಟ್ಟು ಹಾಕಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಸಿಪಿಐ ಮಹಾಂತೇಶ ಧಾಮಣ್ಣವರ, ಬಬಲೇಶ್ವರ ಪಿಎಸ್ಐ ಕಲ್ಲೂರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.