ವಿಜಯಪುರ: ಪ್ರತಿಷ್ಠಿತ ಟೆಕ್ಸ್ ಟೈಲ್ಸ್ ಕಂಪನಿಯಲ್ಲಿ ನಡೆದ ಸುಮಾರು 70 ಲಕ್ಷ ರೂ. ಮೌಲ್ಯದ ಕಳ್ಳತನ ಪ್ರಕರಣ ಭೇದಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದಲ್ಲಿ ಕೆಐಇಡಿ ಕೈಗಾರಿಕೆ ಪ್ರದೇಶದಲ್ಲಿರುವ ಪ್ರತಿಷ್ಠಿತ ಇಟ್ಕೋ ಡೆನಿಮ್ ಟೆಕ್ಸ್ ಟೈಲ್ಸ್ ಕಂಪನಿಯಲ್ಲಿ ನಡೆದ ಕಳ್ಳತನ ಪ್ರಕರಣ ಭೇದಿಸುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ತನಿಖಾ ತಂಡ ಯಶಸ್ವಿಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ನಡೆದ 2ನೇ ಅತಿ ದೊಡ್ಡ ಕಳ್ಳತನ ಪ್ರಕರಣವನ್ನು ಭೇದಿಸಿದಂತಾಗಿದೆ.
ಇಟ್ಕೋ ಡೆನಿಮ್ ಕಂಪನಿಯ ಹಣಕಾಸಿನ ವಿಚಾರ ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯದ ಆದೇಶದ ಮೇರೆಗೆ ಕಂಪನಿಗೆ ಬೀಗ ಹಾಕಲಾಗಿತ್ತು. ಇದರ ಲಾಭ ಪಡೆದ ಅಂತಾರಾಜ್ಯ ಕಳ್ಳರ ಗ್ಯಾಂಗ್ ಜೀನ್ಸ್ ಪ್ಯಾಂಟ್ ತಯಾರಿಕೆಗೆ ಬಳಸುವ 70 ಲಕ್ಷ ರೂ. ಮೌಲ್ಯದ ಉಪಕರಣವನ್ನು ಕದ್ದಿದ್ದರು.
7 ಮಂದಿ ಆರೋಪಿಗಳನ್ನು ಬಂಧನ: ಪ್ರಕರಣ ಸಂಬಂಧ ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಮೂವರು ಪರಾರಿಯಾಗಿದ್ದಾರೆ. ಬಂಧಿತರನ್ನು ಮುಂಬೈ ಮೂಲದ ಸಲೀಮುದ್ದೀನ ಖುರೇಷಿ, ಮಹಾರಾಷ್ಟ್ರದ ಪಾಲ್ಛರ್ ಜಿಲ್ಲೆಯ ಬೊಯಿಸಾಗರದ ಅಸ್ಲಾಂ ಶೇಖ, ಮನೀಶ ಕುಮಾರ ಸಿಂಗ್, ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭೀಮಂಡಿ ನಗರದ ಮೊಹಮ್ಮ ಉಮರ್ ಶೇಖ, ಅಬ್ದುಲ್ ರಹೀಮ್ ಮೋಮಿನ್, ಪಿಂಟುಕುಮಾರ ವರ್ಮಾ ಎಂದು ಗುರುತಿಸಲಾಗಿದೆ. ಇನ್ನುಳಿದ ಆರೋಪಿಗಳಾದ ರಾಕೇಶ ಬೆನವಂಶಿ, ಪ್ರದೀಪ ಶರ್ಮಾ ಹಾಗೂ ಉತ್ತರ ಪ್ರದೇಶದ ಸುಲ್ತಾನ ಪುರದ ಕಮಲೇಶ ಮಿಶ್ರಾ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಉಪಕರಣ ಖರೀದಿ ನೆಪದಲ್ಲಿ ಬಂದಿದ್ದ ಆರೋಪಿ: ಇಟ್ಕೋ ಡೆನಿಮ್ ಟೆಕ್ಸ್ ಟೈಲ್ಸ್ ಕಂಪನಿಗೆ 7 ವರ್ಷದ ಹಿಂದೆ ಬಂಧಿತ ಆರೋಪಿಗಳಲ್ಲಿ ಒಬ್ಬ ಆತನ ಸ್ನೇಹಿತ ಜತೆ ಜೀನ್ಸ್ ತಯಾರಿಕೆಗೆ ಬಳಸುವ ಹಳೆಯ ಉಪಕರಣ ಖರೀದಿ ನೆಪದಲ್ಲಿ ಬಂದಿದ್ದ. ಕಂಪನಿಯ ಎಲ್ಲ ಚಲನವಲನ ಹಾಗೂ ಉಪಕರಣದ ವಹಿವಾಟು ಕುರಿತು ಮಾಹಿತಿ ಸಂಗ್ರಹಿಸಿದ್ದ.
ನಂತರ ಹಣಕಾಸಿನ ವ್ಯವಹಾರ ವಿಚಾರವಾಗಿ ಕಂಪನಿಗೆ ಬೀಗ ಹಾಕಿದ ಮಾಹಿತಿಯನ್ನು ವೈಬ್ಸೈಟ್ ಮೂಲಕ ತಿಳಿದುಕೊಂಡು ವಿಜಯಪುರಕ್ಕೆ ಗ್ಯಾಂಗ್ ಮೂಲಕ ಆಗಮಿಸಿ ಕಂಪನಿ ಹೊರಗಿನ ಚಲನವಲನ ಗಮನಿಸಿದ್ದರು. ಸೆಕ್ಯುರಿಟಿ ಗಾರ್ಡ್ ಬಗ್ಗೆ ಮಾಹಿತಿ ಪಡೆದು, ಕಂಪನಿ ಹಿಂಬದಿಯಿದ್ದ ಜಾಗದ ಮೂಲಕ ಉಪಕರಣ ಕಳ್ಳತನ ಆರಂಭಿಸಿದ್ದರು.
ಒಮ್ಮೆ ಎಲ್ಲ ಉಪಕರಣ ಕಳ್ಳತನ ಮಾಡಿದರೆ ಸಿಕ್ಕಿ ಹಾಕಿಕೊಳ್ಳುವ ಭಯದಲ್ಲಿ 15-20 ದಿನಕ್ಕೊಮ್ಮೆ ಬಂದು ಕಳ್ಳತನ ಮಾಡಿ ಮಹಾರಾಷ್ಟ್ರ, ಉತ್ತರ ಪ್ತದೇಶ ನಾಸಿಕ್, ಮುಂಬೈ ಸೇರಿದಂತೆ ಬೃಹತ್ ವಾಣಿಜ್ಯ ನಗರಿಯಲ್ಲಿ ಮಾರಾಟ ಮಾಡಲು ಸಂಚು ರೂಪಿಸಿದ್ದರು. ಆದರೆ ಕಂಪನಿಯಲ್ಲಿ ಕಳ್ಳತನವಾದ ಮಾಹಿತಿ ಪಡೆದು ಮಾಲೀಕರು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಮೇರೆಗೆ ಎಎಸ್ಪಿ ರಾಮಸಿದ್ದಿ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆಗೆ ಇಳಿದು ವಸ್ತುಗಳ ಸಮೇತ ಆರೋಪಿಗಳನ್ನು ಹೆಡೆಮುರಿ ಕಟ್ಟಿದರು.
ಆತಂಕದಲ್ಲಿದ್ದ ಕೆಲಸಗಾರರು: ಈ ಟೆಕ್ಸಟೈಲ್ಸ್ ಕಂಪನಿಯಲ್ಲಿ ಸುಮಾರು 2 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕಂಪನಿ ಬೀಗ ಹಾಕಿದಾಗ ಜೀವನ ನಡೆಸುವದೇ ಕಷ್ಟವಾಗಿತ್ತು. ಇನ್ನೇನು ನ್ಯಾಯಾಲಯ ಕಂಪನಿ ಆರಂಭಿಸಲು ಅನುಮತಿ ನೀಡುವ ವೇಳೆ 70 ಲಕ್ಷ ರೂ. ಮೌಲ್ಯದ ಉಪಕರಣ ಕಳ್ಳತನ ನಡೆದ ವಿಷಯ ತಿಳಿದು ಶಾಶ್ವತವಾಗಿ ಕಂಪನಿ ಮುಚ್ಚಬಹುದು ಎಂದು ಅಸಹಾಯಕರಾಗಿದ್ದರು. ಆದರೆ ಪೊಲೀಸರ ಯಶಸ್ವಿ ಕಾರ್ಯಾಚರಣೆ ಮತ್ತೊಮ್ಮೆ ಇವರ ಬದುಕಿಗೆ ಹೊಸ ಹುಮ್ಮಸ್ಸು ನೀಡಿದೆ. ಕಂಪನಿ ಪುನಾರಂಭವಾಗಬಹುದು ಎಂದು ಕಾಯುತ್ತಿದ್ದಾರೆ.
70 ಲಕ್ಷ ರೂ. ಮೌಲ್ಯದ ಉಪಕರಣ ಜಪ್ತಿ: ಬಂಧಿತರಿಂದ ಜೀನ್ಸ್ ತಯಾರಿಸಲು ಬಳಸುವ 1,500 ಕಾರ್ಡ್, 158 ಡಿಸ್ಪ್ಲೇ, 250 ಪ್ರಿವೈಂಡರ್ ಹಾಗೂ 160 ಬ್ಲ್ಯಾಕ್ ಬಾಕ್ಸ್ ಸೇರಿ 70 ಲಕ್ಷ ರೂ. ಮೌಲ್ಯದ ಉಪಕರಣ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬನ್ನಿ ಕೊಡುವ ನೆಪದಲ್ಲಿ ಬಂದು ಭಾವನ ಹತ್ಯೆಗೈದ ಭಾಮೈದರು: ಸಹೋದರಿಯ ಕುಂಕುಮ ಅಳಿಸಿದ ಪಾಪಿಗಳು