ವಿಜಯಪುರ: ಮಹಾರಾಷ್ಟ್ರದಲ್ಲಿ ಕೊರೊನಾ ರೋಗ ಉಲ್ಬಣಗೊಂಡಿರುವ ಕಾರಣ ವಿಜಯಪುರ ಜಿಲ್ಲಾಡಳಿತ ಗಡಿ ಭಾಗದಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಿದೆ. ಜೊತೆಗೆ ರೋಗ ಪತ್ತೆಗಾಗಿ ನಿತ್ಯ 3 ಸಾವಿರಕ್ಕೂ ಹೆಚ್ಚು ಸ್ವ್ಯಾಬ್ ಟೆಸ್ಟ್ ಮಾಡಲಾಗುತ್ತಿದ್ದು, ಹಿರಿಯ ನಾಗರಿಕರಿಗೆ ಕಡ್ಡಾಯವಾಗಿ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಕಳೆದ ವರ್ಷ ಕೊರೊನಾ ರೋಗ ಮೊದಲು ಬಾರಿ ಜಿಲ್ಲೆಯಲ್ಲಿ ಕಾಣಿಸಿಕೊಂಡಿತ್ತು. ಅಲ್ಲಿಂದ ಲಾಕ್ಡೌನ್, ಕೊರೊನಾ ಪೀಡಿತ ಪ್ರದೇಶಗಳಿಗೆ ಪ್ರವೇಶ ನಿಷೇಧ ಹೇರಿತ್ತು. ಇದೇ ಮಹಾರಾಷ್ಟ್ರದಿಂದ ಬಂದ ಮಹಿಳೆ ಸ್ವ್ಯಾಬ್ ಟೆಸ್ಟ್‌ನಲ್ಲಿ ಪಾಸಿಟಿವ್ ಪತ್ತೆಯಾಗಿತ್ತು. ಈ ಬಾರಿಯೂ ಮಹಾರಾಷ್ಟ್ರ ರಾಜ್ಯದಿಂದಲೇ ಜಿಲ್ಲೆಯಲ್ಲಿ ಕೊವಿಡ್-19 ಹರಡುವ ಆತಂಕ ಕಾಡುತ್ತಿದೆ. ಇದರಿಂದ ಹೆಚ್ಚು ಹೆಚ್ಚು ರೋಗಿಗಳನ್ನು ಪತ್ತೆ ಹಚ್ಚಿ ಅವರಿಂದ ಕೊವಿಡ್ ಹರಡದಂತೆ ನೋಡಿಕೊಳ್ಳಲು ಕಳೆದ 10 ದಿನಗಳಿಂದ ಕೊರೊನಾ ಸ್ಬ್ಯಾಬ್ ಟೆಸ್ಟ್ ಹೆಚ್ಚಾಗಿ ಮಾಡಲಾಗುತ್ತಿದೆ.
ಮೊದಲು ಕೆಲ ದಿನ 1200 ಜನರ ಸ್ವ್ಯಾಬ್ ಟೆಸ್ಟ್ ಮಾಡಿಸಿದಾಗ 8-10 ಪಾಸಿಟಿವ್ ಪ್ರಕರಣಗಳು ಬರುತ್ತಿದ್ದವು. ಅದನ್ನು ಹೆಚ್ಚಿಸಿ ದಿನಕ್ಕೆ 2 ಸಾವಿರ ಜನರ ಸ್ವ್ಯಾಬ್ ಟೆಸ್ಟ್ ಮಾಡಿದಾಗ 15-20 ಪಾಸಿಟಿವ್ ಪ್ರಕರಣಗಳು ಕಂಡು ಬಂದವು. ಹೆಚ್ಚಾಗಿ ಮಹಾರಾಷ್ಟ್ರದಿಂದ ಬಂದವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವ ಕಾರಣ ನಿತ್ಯ 3 ಸಾವಿರ ಟೆಸ್ಟ್ ಮಾಡಲಾಗುತ್ತಿದ್ದು, ಸೋಂಕಿತರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಈಗ ಮಹಾರಾಷ್ಟ್ರ ರಾಜ್ಯದಿಂದ ಬರುವವರಿಗೆ ಕಡ್ಡಾಯವಾಗಿ ಕೊರೊನಾ ನೆಗಟಿವ್ ರಿರ್ಪೋಟ್ ತರಲು ಸೂಚಿಸಲಾಗಿದೆ.
ಓದಿ-ಮದುವೆಗೆ ತೆರಳುತ್ತಿದ್ದ ವಾಹನ ಪಲ್ಟಿ: ಐವರ ದುರ್ಮರಣ, 50 ಜನರಿಗೆ ಗಾಯ
ಸದ್ಯ ಮಹಾರಾಷ್ಟ್ರದಿಂದ ಯಾವುದೇ ಮಾರ್ಗವಾಗಿ ಬರಲಿ ಅವರನ್ನು ತಡೆದು ಸ್ಬ್ಯಾಬ್ ಟೆಸ್ಟ್ ಮಾಡುವ ರಸ್ತೆಗಳ ಮೂಲಕ ತೆರಳಲು ವ್ಯವಸ್ಥೆ ಮಾಡಲಾಗಿದೆ. ಮಹಾರಾಷ್ಟ್ರ ಗಡಿ ಭಾಗದ ಧೂಳಖೇಡ ಹಾಗೂ ಶಿರಾಡೋಣದಲ್ಲಿ ಸ್ವ್ಯಾಬ್ ಟೆಸ್ಟ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1.86 ಲಕ್ಷ ಜನ 60ವರ್ಷ ಮೇಲ್ಪಟ್ಟಿರುವವರಿದ್ದಾರೆ.
ಇಲ್ಲಿಯವರೆಗೆ 12500 ಸಾವಿರ ಜನ ವ್ಯಾಕ್ಸಿನ್ ಪಡೆದಿದ್ದಾರೆ. ಉಳಿದವರಿಗೂ ಸಹ ವ್ಯಾಕ್ಸಿನ್ ಪಡೆಯುವಂತೆ ಕರೆ ಮಾಡಿ ಮಾಹಿತಿ ನೀಡಲಾಗುತ್ತಿದೆ. ಇದನ್ನು ಹೊರತುಪಡಿಸಿ ಬೀದರ್ ಹಾಗೂ ಕಲಬುರಗಿ ರೀತಿ ವಿಜಯಪುರ ಜಿಲ್ಲೆಯನ್ನು ಕೊವಿಡ್ ಸೂಕ್ಷ್ಮ ಪ್ರದೇಶವೆಂದು ಸರ್ಕಾರ ಎಚ್ಚರ ವಹಿಸುವಂತೆ ಈಗಾಗಲೇ ಸೂಚನೆ ನೀಡಿದೆ.
ಕೋವಿಡ್ ಎರಡನೇ ಅಲೆ ಹಿನ್ನೆಲೆ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಲು ಸೂಚಿಸಿದ್ದು, ಮಾಸ್ಕ್, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯಗೊಳಿಸಲಾಗಿದೆ. ಕೊರೊನಾ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವುದು, ಅನವಶ್ಯಕವಾಗಿ ಕೊರೊನಾ ವಾರಿಯರ್ಸ್ ಜತೆ ವಾಗ್ವಾದ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಜಿಲ್ಲಾಡಳಿತ ನೀಡಿದೆ.