ವಿಜಯಪುರ: ಜಿಲ್ಲೆಯಲ್ಲಿ ಈ ವರ್ಷ ಹಿಂಗಾರು ಉತ್ತಮವಾಗಿರುವ ಕಾರಣ ರೈತರು ಕಡಲೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ. ಆದರೆ ಅವುಗಳಿಗೆ ಬೇಕಾದ ರಸಗೊಬ್ಬರ ಪಡೆಯಲು ಜಿಲ್ಲೆಯ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅಂಗಡಿ ಮಾಲೀಕರು ಸರ್ಕಾರಕ್ಕೆ ತಪ್ಪು ಲೆಕ್ಕ ತೋರಿಸಿ ಅಕ್ರಮವಾಗಿ ದಾಸ್ತಾನು ಹಾಗೂ ಬೆಲೆಯಲ್ಲಿ ಹೆಚ್ಚಳ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೃಷಿ ಇಲಾಖೆಯ ಅಧಿಕಾರಿಗಳು, ವಿಶೇಷ ತಂಡ ರಚಿಸಿ ರೈತರಿಗೆ ಮೋಸ ಮಾಡುತ್ತಿರುವವರ ಅಂಗಡಿ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಜಿಲ್ಲೆಯ ವಿವಿಧ ಕಡೆ ದಾಳಿ ಮಾಡಿರುವ ಅಧಿಕಾರಿಗಳು ಕಳೆದ ಒಂದು ವಾರದ ಅವಧಿಯಲ್ಲಿ ಮೂರು ಅಂಗಡಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ.
ದಾಳಿ ವೇಳೆ ತಪ್ಪು ಕಂಡು ಬಂದ ಕಾರಣ ಮೂರು ಅಂಗಡಿಗಳ ಲೈಸೆನ್ಸ್ ರದ್ದು ಮಾಡಲಾಗಿದೆ. ಈ ಮೂಲಕ ರೈತರಿಗೆ ಮೋಸ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಕೃಷಿ ಇಲಾಖೆ ಅಧಿಕಾರಿಗಳು ನೀಡಿದ್ದಾರೆ.
ವಿಜಯಪುರ ಮಹಾರಾಷ್ಟ್ರದ ಗಡಿ ಜಿಲ್ಲೆಯಾಗಿರುವ ಕಾರಣ ಅಕ್ರಮವಾಗಿ ರಸಗೊಬ್ಬರ ಮಾರಾಟ ಹಾಗೂ ಸಾಗಾಣಿಕೆ ಪ್ರಕರಣಗಳು ಈ ಹಿಂದೆ ಕಂಡು ಬಂದಿದ್ದವು. ಇದರಿಂದ ಎಚ್ಚೆತ್ತಿರುವ ಜಿಲ್ಲಾಡಳಿತ ಕಡ್ಡಾಯವಾಗಿ ಪ್ರತಿಯೊಂದು ಅಂಗಡಿಯ ಮಾಲೀಕರು ಅಂಗಡಿಗಳ ಸ್ಟಾಕ್ ಹಾಗೂ ಮಾರಾಟ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದೆ.
ಅಲ್ಲದೆ ರಸಗೊಬ್ಬರ ದರ ಬೋರ್ಡ್ ಎಲ್ಲರಿಗೂ ಕಾಣುವಂತೆ ಕಡ್ಡಾಯವಾಗಿ ಹಾಕಲು ಆದೇಶ ಮಾಡಲಾಗಿದೆ. ಜೊತೆಗೆ ಯಾವುದೇ ಅಂಗಡಿಯಲ್ಲಿ ರೇಟ್ ಬೋರ್ಡ್ ಇಲ್ಲದಿದ್ದರೆ ಕೂಡಲೇ ಕೃಷಿ ಇಲಾಖೆ ಅಧಿಕಾರಿಗಳನ್ನು ಅಥವಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕ ಮಾಡುವಂತೆ ರೈತರಿಗೆ ಸೂಚನೆ ನೀಡಲಾಗಿದೆ. ಹೀಗಾಗಿ ಕಾಳ ಸಂತೆಯಲ್ಲಿ ರಸಗೊಬ್ಬರ ಮಾರಾಟ ತಡೆಗಟ್ಟಲು ಕೃಷಿ ಇಲಾಖೆ ಕ್ರಮ ಕೈಗೊಂಡಿದೆ.
ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಕೃಷಿ ಅಧಿಕಾರಿಗಳಾದ ಅಮಗೊಂಡ ಬಿರಾದಾರ, ಎಸ್.ಬಿ. ದೊಡಮನಿ, ಆರ್.ಬಿ. ಪಾಟೀಲ ಅವರನ್ನೊಳಗೊಂಡ ತಂಡವು ವಿಜಯಪುರದ ವಿವಿಧ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದ ವೇಳೆಯಲ್ಲಿ ಆನಂದ ಅಗ್ರೋ ಸೆಂಟರ್ನಲ್ಲಿ ಬಿಲ್ಲಿನಲ್ಲಿ ರೈತರ ಹೆಸರು ನಮೂದಿಸಿರುವುದಿಲ್ಲ ಹಾಗೂ ರೈತರ ಸಹಿ ಪಡೆದಿರುವುದಿಲ್ಲ ಎಂಬುದು ಕಂಡು ಬಂದಿದೆ.
ದಾಸ್ತಾನದಲ್ಲಿ ವ್ಯತ್ಯಾಸ ಇರುವುದರಿಂದ ಲೈಸೆನ್ಸ್ ಅಮಾನತು ಮಾಡಲಾಗಿದೆ. ಇದರ ಜೊತೆಗೆ ಸ್ಪಂದನಾ ಅಗ್ರಿ ಸೈನ್ಸ್ ಟೆಕ್ನೋಲಾಜಿ ಮತ್ತು ಬೀರಸಿದ್ದೇಶ್ವರ ಅಗ್ರೋ ಕೇಂದ್ರ ನಾಗಠಾಣ ಹಾಗೂ ರೇಣುಕಾ ಕೃಷಿ ಸೇವಾ ಕೇಂದ್ರ ತಿಕೋಟಾ, ಮಲ್ಲಿಕಾರ್ಜುನ ಟ್ರೇರ್ಸ್ ಮಡಿಕೇಶ್ವರ ಕೇಂದ್ರಗಳ ಮೇಲೆ ದಾಳಿ ಮಾಡಿ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಎನ್ಐಎ ಪರಿಶೀಲನೆ ಮುಕ್ತಾಯ: ಮೂವರು ಪಿಎಫ್ಐ ಮುಖಂಡರು ವಶಕ್ಕೆ