ಮುದ್ದೇಬಿಹಾಳ(ವಿಜಯಪುರ): ತಾಲೂಕಿನ ಬಸರಕೋಡದ ಗ್ರಾಮದ ಯೋಧ ಶಿವಾನಂದ ಬಡಿಗೇರ ಜಮ್ಮು-ಕಾಶ್ಮೀರದ ಗಡಿ ಭದ್ರತಾ ಪಡೆಯಲ್ಲಿ ಕರ್ತವ್ಯದ ವೇಳೆ ಹುತಾತ್ಮರಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸೇನೆಗೆ ಸೇರಿ ಬಹಳ ದಿನ ಏನ್ ಆಗಿರಲಿಲ್ಲ. ಈ ಸಲದ ಗಣೇಶ ಚೌತಿಗೆ ಊರಿಗೆ ಬರುವಂತೆ ಮನೆಯಲ್ಲಿ ಕೇಳಿಕೊಂಡಿದ್ದೆವು. ಬರೋ ದೀಪಾವಳಿಗೆ ಬರುತ್ತೇನೆ ಅಂತಾ ತಿಳಿಸಿದ್ದ. ಕೊನೆಗೂ ವಿಧಿ ನಮ್ಮನ್ನು ನೋಡಲು ಜೀವಂತವಾಗಿ ಬರಲು ಬಿಡಲೇ ಇಲ್ಲ ಎಂದು ಶಿವಾನಂದ ಬಡಿಗೇರ ಅವರ ಪತ್ನಿ ಪುಷ್ಪಾ ಬಡಿಗೇರ ಕಣ್ಣೀರು ಹಾಕುತ್ತಿದ್ದಾರೆ.
ಸೆ.2ರಂದು ಪಾರ್ಥಿವ ಶರೀರ ಆಗಮನ : ಯೋಧ ಶಿವಾನಂದ ಬಡಿಗೇರ ಹುತಾತ್ಮರಾದ ಸುದ್ದಿ ತಿಳಿಯುತ್ತಿದ್ದಂತೆ ತಹಶೀಲ್ದಾರ್ ಅನಿಲ್‌ಕುಮಾರ್ ಢವಳಗಿ, ಪಿಎಸ್‌ಐ ಮಲ್ಲಪ್ಪ ಮಡ್ಡಿ ಹಾಗೂ ತಾಲೂಕು ಪಂಚಾಯತ್ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ ಯೋಧನ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್, ಯೋಧ ಶಿವಾನಂದ ಅವರ ಮರಣೋತ್ತರ ಪರೀಕ್ಷೆ ಹಾಗೂ ಕೋವಿಡ್-19 ಪರೀಕ್ಷೆ ಮುಗಿದ ಬಳಿಕ ಅವರನ್ನು ತವರಿಗೆ ಕಳುಹಿಸಲಾಗುತ್ತದೆ ಎಂಬ ಮಾಹಿತಿಯನ್ನು ಜಮ್ಮುವಿನಲ್ಲಿರುವ ಕಮಾಂಡರ್ ತಿಳಿಸಿದ್ದಾರೆ. ಸೆ.2ರಂದು ಯೋಧನ ಪಾರ್ಥೀವ ಶರೀರ ಜಮ್ಮುವಿನಿಂದ ದೆಹಲಿಗೆ ಬರಲಿದೆ. ನಂತರ ಅಲ್ಲಿಂದ ಬೆಂಗಳೂರು ಮಾರ್ಗವಾಗಿ ಬಸರಕೋಡಕ್ಕೆ ಆಗಮಿಸಲಿದೆ ಎಂದರು.
ವಿಶ್ವಕರ್ಮ ಸಮಾಜದ ವಿಧಿ-ವಿಧಾನದಂತೆ ಅಂತ್ಯಕ್ರಿಯೆ: ಕುಟುಂಬದವರು ತಮ್ಮ ಸಮಾಜದ ವಿಧಿ-ವಿಧಾನದ ಮೂಲಕ ಅಂತ್ಯಕ್ರಿಯೆ ನಡೆಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ವಿಶ್ವಕರ್ಮ ಸಮಾಜದ ಪದ್ದತಿಯಂತೆ ಚಿತೆಗೆ ಅಗ್ನಿಸ್ಪರ್ಶ ಮಾಡಲಾಗುತ್ತದೆ ಎಂದು ತಹಶೀಲ್ದಾರ್ ಅನಿಲ್ ಕುಮಾರ್ ಢವಳಗಿ ತಿಳಿಸಿದ್ದಾರೆ.