ವಿಜಯಪುರ: ಸಿಂದಗಿ ಉಪಚುನಾವಣೆ ಕಣದಲ್ಲಿ ಉಳಿದಿರುವ ಮೂವರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಕೋಟ್ಯಧೀಶರಾದರೆ, ಜೆಡಿಎಸ್ ಅಭ್ಯರ್ಥಿ ಲಕ್ಷಾಧೀಶೆಯಾಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರು ನಾಮಪತ್ರ ಸಲ್ಲಿಸುವ ವೇಳೆ ಅವರು ತಮ್ಮ ಆಸ್ತಿ ವಿವರನ್ನು ಘೋಷಿಸಿಕೊಂಡಿದ್ದಾರೆ. ತಮ್ಮ ಸ್ವಂತ ಹೆಸರಿನಲ್ಲಿ ಚರಾಸ್ತಿ 33,46,765 ರೂ. ಹಾಗೂ ಸ್ಥಿರಾಸ್ತಿ, 6.36 ಕೋಟಿ ರೂ., ಪತ್ನಿ ಹೆಸರಿನಲ್ಲಿ ಚರಾಸ್ತಿ 60,52,713 ಲಕ್ಷ ರೂ. ಹಾಗೂ ಸ್ಥಿರಾಸ್ತಿ 3.25 ಲಕ್ಷ ರೂ., ಅವರ ಅವಲಂಬಿತರು ಸೇರಿ ಒಟ್ಟು 7.37 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಇವರು 1.24 ಕೋಟಿ ರೂ. ಸಾಲ ಮಾಡಿದ್ದಾರೆ.
ಇನ್ನೂ, ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಸಹ ಕೋಟಿ ಒಡೆಯರಾಗಿದ್ದಾರೆ. ಇವರಿಗಿಂತ ಇವರ ಪತ್ನಿಯೇ ಹೆಚ್ಚು ಆಸ್ತಿ ಹೊಂದಿದ್ದಾರೆ. ಭೂಸನೂರ ಸ್ವಂತ ಹೆಸರಿನಲ್ಲಿ 52,35,000 ಲಕ್ಷ ರೂ., ಸ್ಥಿರಾಸ್ತಿ 92.32 ಲಕ್ಷ ರೂ., ಪತ್ನಿ ಹೆಸರಿನಲ್ಲಿ 32.70 ಲಕ್ಷ ರೂ. ಹಾಗೂ 1,07,74,000 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಇವರ ಅವಲಂಬಿತರು ಸೇರಿ 3.78 ಕೋಟಿ ಆಸ್ತಿ ಒಡೆಯರಾಗಿದ್ದಾರೆ. ಇವರು ಯಾವುದೇ ಸಾಲ ಪಡೆಯದಿರುವುದು ವಿಶೇಷವಾಗಿದೆ.
ಜೆಡಿಎಸ್ ಅಭ್ಯರ್ಥಿ ನಾಜಿಯಾ ಶಕೀಲಾ ಅಂಗಡಿ ಲಕ್ಷಾಧೀಶೆಯಾಗಿದ್ದಾರೆ. ಇವರ ಹೆಸರಿನಲ್ಲಿ 10.70 ಲಕ್ಷ ರೂ. ಚರಾಸ್ಥಿ ಇದೆ. 1 ಲಕ್ಷ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಇವರ ಪತಿ ಹೆಸರಿನಲ್ಲಿ ಯಾವುದೇ ಚರಾಸ್ಥಿ ಇಲ್ಲ. 9.60 ಲಕ್ಷ ರೂ. ಸ್ಥಿರಾಸ್ತಿ ಇದೆ. ಇವರ ಅವಲಂಬಿತರು ಸೇರಿ ಒಟ್ಟು 21.13 ಲಕ್ಷ ರೂ. ಆಸ್ತಿ ಹೊಂದಿದ್ದಾರೆ.
ಒಟ್ಟು 8 ಅಭ್ಯರ್ಥಿಗಳಿಂದ 12 ನಾಮಪತ್ರ ಸಲ್ಲಿಕೆಯಾಗಿದ್ದು, ನಾಮಪತ್ರ ಹಿಂಪಡೆಯಲು ಅ.13 ರವರೆಗೆ ಕಾಲಾವಕಾಶ ಇದೆ. ಅಂತಿಮವಾಗಿ ಕಣದಲ್ಲಿ ಉಳಿಯುವ ಅಭ್ಯರ್ಥಿಗಳು ಗೆಲುವಿಗಾಗಿ ಪೈಪೋಟಿ ನಡೆಸಲಿದ್ದಾರೆ.