ವಿಜಯಪುರ: ನಾನು ಹಿಂದೂ ಅಲ್ವಾ, ನಮ್ಮ ತಂದೆ, ತಾಯಿ ಹಿಂದೂ ಅಲ್ವಾ, ನನಗೆ ಸಿದ್ದರಾಮಯ್ಯ ಅಂತ ಹೆಸರಿಟ್ಟಿಲ್ವಾ, ಹಿಂದುತ್ವ ಬಗ್ಗೆ ಮಾತನಾಡಿದರೆ ವೋಟ್ ಬ್ಯಾಂಕ್ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ, ಹಿಂದೂ - ಹಿಂದುತ್ವ ಅಂದರೆ ಏನು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಹೇಳಿಕೆಗೆ ಹರಿಹಾಯ್ದರು.
ಕಾಂಗ್ರೆಸ್ ಪ್ರಜಾಧ್ವನಿ ರಥಯಾತ್ರೆ ಇಂದು ಜಿಲ್ಲೆಯ ಸಿಂದಗಿ ಪಟ್ಟಣಕ್ಕೆ ಆಗಮಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ.ಟಿ.ರವಿ ಹೇಳಿದರೆ ನಾನು ಹಿಂದೂ ಆಗಲ್ವಾ, ಹಿಂದೂ ಪರ ಮಾತನಾಡಿದರೆ ತಮ್ಮನ್ನು ಹಿಂದೂ ವಿರೋಧಿ ಓಟ್ ಬ್ಯಾಂಕ್ ಗೋಸ್ಕರ್ ಮಾತನಾಡುತ್ತಾರೆ ಎನ್ನುತ್ತಾರೆ. ತಮ್ಮ ಅಧಿಕಾರ ಅವಧಿಯಲ್ಲಿ 15 ಲಕ್ಷ ಮನೆಗಳನ್ನು ಹಂಚಿದ್ದೇನೆ, ಅದರಲ್ಲಿ ಕೇವಲ ಮುಸ್ಲಿಂರಿಗೆ ಹಂಚಿದ್ದೇನಾ, ಹಿಂದೂಗಳು ಸಹ ಫಲಾನುಭವಿಗಳು ಇಲ್ಲವಾ? ಎಂದು ಪ್ರಶ್ನಿಸಿದರು. ಇವೆಲ್ಲಾ ಸುಳ್ಳು ಮುಚ್ಚಿ ಕೊಳ್ಳಲು ಬಿಜೆಪಿ ಈ ರೀತಿ ಹೇಳಿಕೆ ನೀಡುತ್ತದೆ ಎಂದು ಆರೋಪಿಸಿದರು.
ಬಿಜೆಪಿಗೆ ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಬದಲಾವಣೆ ಮಾಡಲು ಆಗಿಲ್ಲ, ರೈತರ ಬಿಕ್ಕಟ್ಟಿಗೆ ಪರಿಹಾರ ಒದಗಿಸಲಾಗಿಲ್ಲ, ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ 2017ರಲ್ಲಿ ಹೇಳಿದ್ದರು. ಆದರೆ, ರೈತರ ಸಾಲ ದುಪ್ಪಟ್ಟಾಯಿತೇ ಹೊರತು ಆದಾಯ ದುಪ್ಪಟ್ಟು ಆಗಲಿಲ್ಲ ಎಂದು ಟೀಕಿಸಿದರು. ಸಿದ್ದರಾಮಯ್ಯ ಆರೋಪಗಳೆಲ್ಲ ಸುಳ್ಳು ಎನ್ನುವ ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಈಗ ಏಳು ಕೆಜಿ ಇದ್ದ ಅಕ್ಕಿ 5 ಕೆಜಿಗೆ ಇಳಿಸಿದ್ದು ಸುಳ್ಳಾ?ಅಕ್ಕಿ ಕೇಂದ್ರ ಸರ್ಕಾರದ್ದು, ಚೀಲ ಮಾತ್ರ ಕಾಂಗ್ರೆಸ್‌ನದ್ದು ಎನ್ನುವ ಬಿಜೆಪಿಗರು ತಮ್ಮದೇ ಪಕ್ಷದ ಆಡಳಿತವಿರುವ ಉತ್ತರ ಪ್ರದೇಶ, ಗುಜರಾತ, ಅಸ್ಸೋಂನಲ್ಲಿ ಏಕೆ ಕೊಡುತ್ತಿಲ್ಲ? ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ನೀಡಿದ್ದೇವೆ ಎಂದರು.
ಇಬ್ಬರು ಕನ್ನಡ ಪರ ಹೋರಾಟಗಾರರ ವಿರುದ್ಧ ರೌಡಿಶೀಟರ್ ಕೇಸ್ ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಕನ್ನಡಕ್ಕಾಗಿ ಹೋರಾಟ ಮಾಡುವವರ ವಿರುದ್ಧ ರೌಡಿಶೀಟರ್ ಓಪನ್ ಮಾಡಬಾರದು, ಕನ್ನಡ ಹೋರಾಟಗಾರರ ವಿರುದ್ಧ ಕೇಸ್ ಹಾಕಿದ್ದರೇ ತಕ್ಷಣವೇ ಕೇಸ್ ವಾಪಸ್ ಪಡೆದು, ಪ್ರಕರಣ ಹಿಂಪಡೆಯಬೇಕು. ಕನ್ನಡ ಭಾಷೆ, ಜಲ, ನೆಲಕ್ಕಾಗಿ ಹೋರಾಟ ಮಾಡಿದರೆ ಅವರ ಮೇಲೆ ಕೇಸ್ ಹಾಕಬಾರದು. ನಮ್ಮ ಭಾಷೆ, ನೆಲ, ಜಲಕ್ಕಾಗಿ ಹೋರಾಟ ಮಾಡೋದು ನಮ್ಮ ಹಕ್ಕು ಎಂದರು.
ಕುಮಾರಸ್ವಾಮಿ ಸಿಎಂ ಆಗದಿದ್ದರೆ ರಾಜಕೀಯ ನಿವೃತ್ತಿ ಸಿಎಂ ಇಬ್ರಾಹಿಂ: ಮಾಜಿ ಸಿಎಂ ಕುಮಾರಸ್ವಾಮಿ ಮುಂದಿನ ಸಿಎಂ ಆಗದಿದ್ದರೆ, ತಾವು ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಜೆಡಿಎಸ್ ರಾಜಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರಿಗೆ ವಯಸ್ಸಾಗಿದೆ ನಿವೃತ್ತಿ ಹೊಂದಿದದರು ಹೊಂದಬಹುದು ಎಂದು ವ್ಯಂಗವಾಡಿದರು. ನಾನು ಜೆಡಿಎಸ್ನಲ್ಲಿ ಇದ್ದಾಗ 58 ಸ್ಥಾನಗಳಿಸಿದ್ದೆವು, ಆ ಮೇಲೆ 28ಕ್ಕೆ ಇಳಿಯಿತು, ಕಳೆದ ಬಾರಿ 37 ಸೀಟು ಬಂದಿವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಇದನ್ನೂ ಓದಿ: ಹಾಸನದಲ್ಲಿ ಕಣಕ್ಕಿಳಿಯಲಿದ್ದಾರಾ ಭವಾನಿ ರೇವಣ್ಣ? ಜೆಡಿಎಸ್ ಚುನಾವಣೆ ಲೆಕ್ಕಾಚಾರ ಏನು?