ವಿಜಯಪುರ: ನಗರದ ಹೊರ ವಲಯದಲ್ಲಿರುವ ಶಿವಗಿರಿ ಕ್ಷೇತ್ರ ಮಹಾ ಶಿವರಾತ್ರಿ ಹಬ್ಬಕ್ಕೆ ಸಜ್ಜು ಗೊಂಡಿದೆ. ಇಲ್ಲಿ ಪ್ರತಿಷ್ಠಾಪಿಸಲಾಗಿರುವ 85 ಅಡಿ ಎತ್ತರದ ಶಿವನ ಮೂರ್ತಿಯ ದರ್ಶನಕ್ಕಾಗಿ ವಿವಿಧ ಜಿಲ್ಲೆಗಳ ಭಕ್ತರು ಭೇಟಿ ನೀಡುತ್ತಾರೆ. ಶಿವಗಿರಿಯ ಉಸ್ತುವಾರಿ ನಿರ್ವಹಿಸುತ್ತಿರುವ ಟಿ.ಕೆ.ಪಾಟೀಲ ಚಾರಿಟೇಬಲ್ ಟ್ರಸ್ಟ್ ಈ ವರ್ಷದ ಉತ್ಸವವನ್ನು ಧಾರ್ಮಿಕ ಶ್ರದ್ಧಾ, ಭಕ್ತಿಯ ಆಚರಣೆಯೊಂದಿಗೆ ಸಾಂಸ್ಕೃತಿಕವಾಗಿಯೂ ವಿಜೃಂಭಣೆಯಿಂದ ಆಚರಿಸಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ತಿಳಿಸಿದೆ.
ಶಿವಗಿರಿ ಚಾರಿಟೇಬಲ್ ಟ್ರಸ್ಟಿ ಆರತಿ ಪಾಟೀಲ ಮಾತನಾಡಿ, ನಾಳೆ ಬೆಳಿಗ್ಗೆ 5 ಗಂಟೆಗೆ ಕಾಶಿ ವಿಶ್ವನಾಥನಿಗೆ ರುದ್ರಾಭಿಷೇಕ, ಭಸ್ಮಾರ್ಚನೆ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಪಂಚ ಕಳಸಾರ್ಚನೆ ಬಳಿಕ ಪ್ರತಿ ಗಂಟೆಗೊಮ್ಮೆ ಪೂಜೆ ನಡೆಯಲಿದೆ. ಇದು ಅಹೋರಾತ್ರಿ ನೆರವೇರಲಿದೆ. ಬೆಳಿಗ್ಗೆ 6.30ಕ್ಕೆ ಮಂಗಳ ವಾದ್ಯಗಳೊಂದಿಗೆ ಶಹನಾಯಿ ಕಾರ್ಯಕ್ರಮ, ಭರತನಾಟ್ಯ, 8.30ಕ್ಕೆ ಜಾತ್ರಾ ಉತ್ಸವದ ಧ್ವಜಾರೋಹಣ, 9.00ಕ್ಕೆ ಅಮ್ಮನವರ ಪೂಜೆ ನಡೆಯಲಿದೆ. ಸಂಜೆ 4 ಗಂಟೆಗೆ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮವಿದೆ ಎಂದರು.
ಸಂಜೆ 4.30ಕ್ಕೆ ಪಂಚಲೋಹದ ಬಂಗಾರಲೇಪಿತ 23 ಅಡಿ ಎತ್ತರದ ರಥದಲ್ಲಿ ಶಿವನ ಬೆಳ್ಳಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಬಳಿಕ ಸಂಜೆ 5 ಗಂಟೆಗೆ ಒಂದೆಡೆ ವಿಜಯಪುರದ ನೂರು ಮಂದಿ ಮುತ್ತೈದೆಯರು ರಥದ ಹಗ್ಗ ಎಳೆದರೆ, ಇನ್ನೊಂದೆಡೆ ನೂರು ಮಂದಿ ಸೊಸೆಯರು ಹಗ್ಗ ಎಳೆಯಲಿದ್ದಾರೆ. ಹೆಣ್ಣುಮಕ್ಕಳೇ ಸೇರಿ ರಥ ಎಳೆಯುವುದು ಇಲ್ಲಿನ ವಿಶೇಷತೆ. ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಮನರಂಜನಾ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದು, ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಬಾರಿ ಎರಡು ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಚಾರಿಟೇಬಲ್ ಟ್ರಸ್ಟಿ ರಾಮನಗೌಡ ಪಾಟೀಲ ಮಾತನಾಡಿ, ದೇವಸ್ಥಾನವನ್ನು 2006 ಮಾರ್ಚ್ 16 ರಂದು ಸ್ಥಾಪಿಸಲಾಗಿದೆ. ಇದು 17ನೇ ವರ್ಷದ ಜಾತ್ರೆ. ಈ ಹಿಂದೆ ನನ್ನ ತಮ್ಮ, ಮಗಳನ್ನು ಶಿವರಾತ್ರಿಗೆ ಬೆಂಗಳೂರಿನಲ್ಲಿ ಜಾತ್ರೆ ನೋಡಲು ಕರೆದುಕೊಂಡು ಹೋದಾಗ ಅಲ್ಲಿ ಶಿವನ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ. ಇದಕ್ಕೆ ನನ್ನ ತಮ್ಮ ಮಗಳಿಗೆ ಇಂತಹ ಶಿವಲಿಂಗ ದೇವಸ್ಥಾನವನ್ನು ನಾವೇ ನಿರ್ಮಿಸೋಣ ಎಂದು ಮಾತು ಕೊಟ್ಟಿದ್ದರು. ಅದರಂತೆ ಇಲ್ಲಿ ಶಿವನ ದೇವಸ್ಥಾನವನ್ನು ನಿರ್ಮಿಸಲಾಯಿತು ಎಂದರು.
ಇದನ್ನೂ ಓದಿ: ಮಹಾ ಶಿವರಾತ್ರಿ: ಹಿಂದಿ ಚಿತ್ರಗೀತೆಗಳಲ್ಲಿ ಪರಶಿವನ ಗುಣಗಾನ