ವಿಜಯಪುರ : ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರ ಅಡಗು ತಾಣದ ಮೇಲೆ ದಾಳಿ ಸಂದರ್ಭದಲ್ಲಿ ಹುತಾತ್ಮರಾದ ಯೋಧ ಕಾಶಿರಾಮ ಬಮ್ಮನಹಳ್ಳಿ ಅವರಿಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ ಮರಣೋತ್ತರ ಶೌರ್ಯ ಪ್ರಶಸ್ತಿಯನ್ನು ನಿನ್ನೆ ನೀಡಲಾಯಿತು. ಕಾಶಿರಾಮ ಪತ್ನಿ ಸಂಗೀತಾ ಬೊಮ್ಮಹಳ್ಳಿ ಹಾಗೂ ತಾಯಿ ಶಾಂತಾಬಾಯಿ ಅವರಿಗೆ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಮನಾಥ ಕೋವಿಂದ್ ಅವರಿಂದ ಸ್ವೀಕರಿಸಿದರು.
ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ಅಡಗಿರುವ ಮಾಹಿತಿ ಪಡೆದ ಸೇನಾ ಸಿಬ್ಬಂದಿ 2021ರ ಜುಲೈ 1ರಂದು ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದರು. ಆ ಕಾರ್ಯಾಚರಣೆಯಲ್ಲಿ ವಿಜಯಪುರ ಜಿಲ್ಲೆಯ 37 ವರ್ಷದ ಯೋಧ (ಹವಾಲ್ದಾರ್) ಕಾಶಿರಾಮ ಬೊಮ್ಮನಹಳ್ಳಿ ಸಹ ಇದ್ದರು.
ಈ ವೇಳೆ ಉಗ್ರರ ಮೇಲೆ ವೀರಾವೇಶದಿಂದ ಗುಂಡಿನ ದಾಳಿಯನ್ನು ಕಾಶಿರಾಮ ನಡೆಸಿದ್ದರು. ಅದಕ್ಕೆ ಎದುರಾಗಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಇದರಲ್ಲಿ ಕಾಶಿರಾಮ ಅವರಿಗೆ ಗುಂಡು ತಗುಲಿ ಅವರು ಹುತ್ಮಾತ್ಮರಾಗಿದ್ದರು. ನಂತರ ಕೇಂದ್ರ ಸರ್ಕಾರ 2022ರ ಜನವರಿ 26ರಂದು ಮರಣೋತ್ತರವಾಗಿ ಹುತಾತ್ಮ ಯೋಧ ಕಾಶಿರಾಮ ಬೊಮ್ಮನ ಹಳ್ಳಿಯವರಿಗೆ ಶೌರ್ಯ ಪ್ರಶಸ್ತಿ ಘೋಷಣೆ ಮಾಡಿತ್ತು. ನಿನ್ನೆ ಮೇ 10ರಂದು ಪ್ರಶಸ್ತಿ ಪದಕ ನೀಡಿ ಗೌರವಿಸಲಾಯಿತು.
ಹಿನ್ನೆಲೆ : ಯೋಧ ಕಾಶಿರಾಮ ಬೊಮ್ಮನಹಳ್ಳಿ ಉಕ್ಕಲಿಯಲ್ಲಿ 1986 ಜುಲೈ 31ರಂದು ಜನಿಸಿದ್ದರು. ಪ್ರಾಥಮಿಕ ಶಿಕ್ಷಣ ಮುಗಿಸಿ 2005ರಲ್ಲಿ ವಿಜಯಪುರದಲ್ಲಿ ನಡೆದ ಸೇನಾ ನೇಮಕಾತಿಯಲ್ಲಿ ಪಾಲ್ಗೊಂಡು ಆಯ್ಕೆಯಾಗಿದ್ದರು. ಒಂದು ವರ್ಷ ಬೆಂಗಳೂರಿನ ಎಂಇಜಿ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು ಸೇನೆಗೆ ನಿಯೋಜನೆಗೊಂಡಿದ್ದರು. ಮುಂದೆ ವಿವಿಧೆಡೆ ಸೇವೆ ಸಲ್ಲಿಸಿ 2019ರಲ್ಲಿ ಜಮ್ಮು ಕಾಶ್ಮೀರದ 44 ರಾಜಪೂತ ರಾಷ್ಟ್ರೀಯ ರೈಪಲ್ ಕೇಂದ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಸಂಪುಟ ಸರ್ಕಸ್.. ಸಿಎಂ-ಶಾ ಭೇಟಿ ಅಂತ್ಯ, ಬರಿಗೈಯಲ್ಲೇ ರಾಜ್ಯಕ್ಕೆ ಬೊಮ್ಮಾಯಿ ವಾಪಸ್