ಮುದ್ದೇಬಿಹಾಳ/ವಿಜಯಪುರ: ಕೆಮ್ಮು, ನೆಗಡಿ ಕಂಡು ಬಂದ ಕಾರಣ ಇಬ್ಬರು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸಿದ ಘಟನೆ ಪಟ್ಟಣದ ವಿಬಿಸಿ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.
ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ್ದ ಸಿಪಿಐ ಆನಂದ ವಾಘಮೋಡೆ, ಪರೀಕ್ಷಾ ಕೇಂದ್ರದ ಅಧೀಕ್ಷಕರು, ಆರೋಗ್ಯ ಇಲಾಖೆಯ ನಿರೀಕ್ಷಕರು ಈ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿದರು. ಈ ಇಬ್ಬರು ವಿದ್ಯಾರ್ಥಿಗಳಿಗೆ ಗಂಟಲು ದ್ರವದ ಪರೀಕ್ಷೆ ನಡೆಸಲಾಗುವುದು ಎಂದು ಆರೋಗ್ಯ ನಿರೀಕ್ಷಕ ಎಂ.ಎಸ್.ಗೌಡರ ಮಾಹಿತಿ ನೀಡಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಒಟ್ಟು 38,101 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 188 ಪರೀಕ್ಷಾ ಕೇಂದ್ರಗಳಲ್ಲಿ 38,101 ವಿದ್ಯಾರ್ಥಿ ಗಳು ಪರೀಕ್ಷೆ ಬರೆಯುತ್ತಿದ್ದು, ಅದರಲ್ಲಿ 18,686 ಬಾಲಕರು, 15 ಸಾವಿರ ಬಾಲಕಿಯರು ಸೇರಿ 33,686 ಹೊಸ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅದರ ಜತೆಗೆ 3120 ಬಾಲಕರು, 1295 ಬಾಲಕಿಯರು ಸೇರಿ 4,415 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.
ತಾಲೂಕುವಾರು ನೋಡುವುದಾದರೆ ಬಸವನಬಾಗೇವಾಡಿ 5821, ವಿಜಯಪುರ ನಗರ 6864, ವಿಜಯಪುರ ಗ್ರಾಮೀಣ 6795, ಚಡಚಣ 2747, ಇಂಡಿ 4138, ಮುದ್ದೇಬಿಹಾಳ 5444, ಸಿಂದಗಿ 6292 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.
ಇನ್ನೂ 153 ಸರ್ಕಾರಿ, 18 ಸಮಾಜ ಕಲ್ಯಾಣ ಇಲಾಖೆ ಶಾಲೆಗಳು, 208 ಖಾಸಗಿ ಅನುದಾನಿತ, 194 ಖಾಸಗಿ ಅನುದಾನ ರಹಿತ ಶಾಲೆಗಳು ಸೇರಿ 573 ಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.