ವಿಜಯಪುರ : ಇಂದು ನಿಧನರಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಹಾಗೂ ಪಂಚ ನದಿಗಳ ಬೀಡು ವಿಜಯಪುರಕ್ಕೂ ನಂಟು ಇದೆ. 2010ರಲ್ಲಿ ಭೀಮಾ ನದಿ ನೀರು ರೈತವರ್ಗ ಸಮಿತಿ ದಶಮಾನೋತ್ಸವ ಕಾರ್ಯಕ್ರಮಕ್ಕೆ ದೊರೆಸ್ವಾಮಿ ಜಿಲ್ಲೆಗೆ ಆಗಮಿಸಿದ್ದರು.
ಮಹಾರಾಷ್ಟ್ರ,ಕರ್ನಾಟಕದ ಪಾಲಿನ ನೀರು ಬಿಡುಗಡೆ ಮಾಡುತ್ತಿಲ್ಲ ಎಂದು ಭೀಮಾನದಿ ನೀರು ರೈತವರ್ಗ ಸಮಿತಿ ಸುಪ್ರಿಂ ಕೋರ್ಟ್ ಮೊರೆ ಹೋಗಿತ್ತು. 2000ರಲ್ಲಿ ರಚನೆಯಾಗಿದ್ದ ಈ ಸಮಿತಿ ತನ್ನ ಹೋರಾಟದ ಮೂಲಕ ಅಂದು ಬೇಸಿಗೆಯಲ್ಲಿ ಪ್ರತಿದಿನ 400 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಮಹಾರಾಷ್ಟ್ರಕ್ಕೆ ಮಧ್ಯಂತರ ಆದೇಶ ನೀಡಿತ್ತು.
ಈ ಸಮಿತಿಯ ದಶಮಾನೋತ್ಸವ ಕಾರ್ಯಕ್ರಮ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮರಗೂರು ಗ್ರಾಮದ ಬಳಿ ಭೀಮಾ ಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಹತ್ತಿರ ಜನವರಿ 8 ರಿಂದ 10ರವರೆಗೆ ಮೂರು ದಿನ ನಡೆದಿತ್ತು. ಸಮಿತಿ ಅಧ್ಯಕ್ಷ ಮತ್ತು ಭೀಮಾ ಹೋರಾಟಗಾರ ಪಂಚಪ್ಪ ಕಲಬುರ್ಗಿ ಈ ಕಾರ್ಯಕ್ರಮ ಆಯೋಜಿಸಿದ್ದರು.
ಈ ಹೋರಾಟಕ್ಕೆ ಉದ್ಘಾಟಕರಾಗಿ ಆಗಮಿಸಿದ್ದ ದೊರೆಸ್ವಾಮಿ, ಕಾರ್ಯಕ್ರಮದ ಅಚ್ಚುಕಟ್ಟುತನದಿಂದ ಪ್ರಭಾವಿತರಾಗಿ ಮೂರೂ ದಿನ ಕಾರ್ಯಕ್ರಮ ಮುಗಿಯುವವರೆಗೆ ಅಲ್ಲಿಯೇ ಇದ್ದು ಹೋರಾಟಗಾರರನ್ನು ಹುರುದುಂಬಿಸಿದ್ದರು.
ಪಂಚಪ್ಪ ಸಂತಾಪ : ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ನಿಧನಕ್ಕೆ ಭೀಮಾ ಹೋರಾಟಗಾರ ಮತ್ತು ಭೀಮಾ ನದಿ ನೀರು ರೈತವರ್ಗ ಸಮಿತಿ ಅಧ್ಯಕ್ಷ ಪಂಚಪ್ಪ ಕಲಬುರಗಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ದೊರೆಸ್ವಾಮಿ ಪಕ್ಷಬೇಧವಿಲ್ಲದೆ ಸಮಾಜಪರ ಹೋರಾಟಗಳಿಗೆ ಪ್ರೇರಣೆಯಾಗಿದ್ದರು.
ಅವರ ಅಗಲಿಕೆ ಹೋರಾಟಗಾರರಿಗೆ ತೀವ್ರ ನೋವುಂಟು ಮಾಡಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲಿ ಎಂದು ಕಂಬನಿ ಮಿಡಿದಿದ್ದಾರೆ.