ವಿಜಯಪುರ: ಗಾಲಿ ಜನಾರ್ದನ ರೆಡ್ಡಿ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. ಅದರಿಂದ ಕಾಂಗ್ರೆಸ್ಗೆ ಲಾಭವಾಗಬಹುದು, ಇಲ್ಲ ನಷ್ಟವಾಗಬಹುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಜನಾರ್ದನ ರೆಡ್ಡಿ ಈಗ ಹೊಸ ಪಕ್ಷ ಕಟ್ಟುತ್ತಿದ್ದಾರೆ. ಮುಂದೆ ಯಾವ ರೀತಿ ಪಕ್ಷವನ್ನು ನಡೆಸಿಕೊಂಡು ಹೋಗುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಹೇಗೆಲ್ಲಾ ಸಂಘಟನೆ ಮಾಡ್ತಾರೆ ಎನ್ನುವುದರ ಮೇಲೆ ಪಕ್ಷ ಎಷ್ಟು ಬಲ ಪಡೆದುಕೊಳ್ಳುತ್ತದೆ ಎಂದು ಗೊತ್ತಾಗುತ್ತದೆ. ತಕ್ಷಣಕ್ಕೆ ಏನೂ ಹೇಳಲು ಆಗುವುದಿಲ್ಲ ಎಂದರು.
ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆಯಿಂದ ಕಾಂಗ್ರೆಸ್ಗೆ ಅನುಕೂಲ ಆಗುವ ವಿಚಾರವಾಗಿ ಪ್ರತಿಕ್ರಿಯಿಸಿ, ಸದ್ಯಕ್ಕೆ ಏನು ಹೇಳಲು ಸಾಧ್ಯವಿಲ್ಲ. ಅವರ ಪಕ್ಷದಿಂದ ನಮಗೂ ಪ್ಲಸ್ ಆಗಬಹುದು ಅಥವಾ ಮೈನಸ್ ಕೂಡಾ ಆಗಬಹುದು. ಯಾವ ಪಕ್ಷದ ಮತಗಳನ್ನು ತೆಗೆದುಕೊಳ್ಳುತ್ತಾರೆ ಅನ್ನೋದರ ಮೇಲೆ ಡಿಪೆಂಡ್ ಆಗಿರುತ್ತದೆ. ಮುಂದಿನ ದಿನ ಅವರ ಪಕ್ಷದ ಬೆಳವಣಿಗೆ ಹೇಗಿರುತ್ತದೆ ಎಂದು ನೋಡೋಣ ಎನ್ನುವ ಮೂಲಕ ರೆಡ್ಡಿ ಪರ ಪರೋಕ್ಷವಾಗಿ ಸಾಪ್ಟ್ ಕಾರ್ನರ್ ತೋರಿದರು.
ಇದನ್ನೂ ಓದಿ: ಜನಾರ್ದನ ರೆಡ್ಡಿ ಹೊಸ ಪಕ್ಷ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ: ಸಂಸದ ಸಂಗಣ್ಣ ಕರಡಿ
2013 ರಲ್ಲಿ ಸಚಿವ ಶ್ರೀರಾಮುಲು ಮತ್ತು ಬಿ ಎಸ್ ಯಡಿಯೂರಪ್ಪ ಹೊಸ ಪಕ್ಷ ಸ್ಥಾಪನೆಯಿಂದ ಕಾಂಗ್ರೆಸ್ಗೆ ಅನುಕೂಲವಾಗಿದೆ. ಇದೀಗ ಕಾಂಗ್ರೆಸ್ಗೆ ಅನುಕೂಲ ಆಗುತ್ತದೆಯೇ ಎನ್ನುವ ವಿಚಾರ ಮಾತನಾಡುವುದು ಸೂಕ್ತವಲ್ಲ. ನಿನ್ನೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ಹೊಸ ಪಾರ್ಟಿ ಘೋಷಣೆ ಮಾಡಿದ್ದಾರೆ ಅಷ್ಟೇ. ಇನ್ನೂ ಬಹಳ ದೂರ ಕ್ರಮಿಸಬೇಕಾಗಿದೆ. ಸ್ವಲ್ಪ ದಿನ ಕಾದು ನೋಡೋಣ ಎಂದರು.
ಬಿಜೆಪಿ ಸರ್ಕಾರದ ಮೇಲೆ ಶೇಕಡಾ 40 ರಷ್ಟು ಕಮಿಷನ್ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬಂಧನ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಬಿಜೆಪಿ ವಿರುದ್ಧ ಯಾರು ಇರುತ್ತಾರೋ ಅವರನ್ನು ಈ ರೀತಿ ದ್ವೇಷ ಮಾಡುತ್ತಾರೆ, ಅದೇನು ಹೊಸದಲ್ಲ ಬಿಡಿ. ಈ ಬಗ್ಗೆ ನಿರೀಕ್ಷೆ ಮಾಡುವ ಪ್ರಶ್ನೆಯೇ ಇಲ್ಲ ಎನ್ನುವ ಮೂಲಕ ಬಿಜೆಪಿ ವರ್ತನೆಯನ್ನು ಖಂಡಿಸಿದರು.
ಇದನ್ನೂ ಓದಿ: ಜನಾರ್ದನ ರೆಡ್ಡಿ ಹೊಸ ಪಕ್ಷ ರಚನೆ: ಸಿ ಟಿ ರವಿ, ರೇಣುಕಾಚಾರ್ಯ ಹೇಳಿದ್ದೇನು?
30 ರಂದು ಬೃಹತ್ ಸಮಾವೇಶ: ಡಿಸೆಂಬರ್ 30 ರಂದು ಕಾಂಗ್ರೆಸ್ ಬೃಹತ್ ಕಾರ್ಯಕರ್ತರ ಸಮಾವೇಶ ಹಮ್ಮಿಕೊಂಡಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಿರ್ದೇಶನದ ಮೇರೆಗೆ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಉತ್ತರ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಸಮಾವೇಶ ನಡೆಯಲಿದೆ. ಈ ಕುರಿತು ಚರ್ಚೆ ನಡೆಸಲು ಐದು ಜಿಲ್ಲೆಯ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರನ್ನು ಕರೆಯಲಿದ್ದೇವೆ. ಸಮಾವೇಶದಲ್ಲಿ ಯಾವುದೇ ಕೇಂದ್ರ ನಾಯಕರು ಬರುವುದಿಲ್ಲ, ಇದು ಕೇವಲ ಸ್ಥಳೀಯ ಜನಪ್ರತಿನಿಧಿಗಳ ಸಮಾವೇಶ ಎಂದರು.
ಇದನ್ನೂ ಓದಿ: ಹೊಸ ರಾಜಕೀಯ ಪಕ್ಷ ಘೋಷಿಸಿದ ಮಾಜಿ ಸಚಿವ ಜನಾರ್ದನ ರೆಡ್ಡಿ!