ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ಮತಕ್ಷೇತ್ರದ ಬಿಜೆಪಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಅವರನ್ನು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದ 24 ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಜಿಲ್ಲೆಯಲ್ಲಿ ಮೂವರು ಬಿಜೆಪಿ ಶಾಸಕರಿದ್ದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ವಿರುದ್ಧ ಕಿಡಿಕಾರುವ ಮೂಲಕ ಸರ್ಕಾರದ ವಿರುದ್ಧ ಮುನಿಸಿಕೊಂಡಿದ್ದಾರೆ. ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಇದೇ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇನ್ನೂ ಸಿಎಂ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶಾಸಕ ಎ.ಎಸ್. ಪಾಟೀಲ ನಡಹಳ್ಳಿಗೆ ಸಹಜವಾಗಿ ನಿಗಮ ಮಂಡಳಿ ಸ್ಥಾನ ಒದಗಿ ಬಂದಿದೆ.
ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಎರಡು ಬಾರಿ ಶಾಸಕರಾಗಿದ್ದ ನಡಹಳ್ಳಿ, ನಂತರದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಸೇರ್ಪಡೆಗೊಂಡು ಮುದ್ದೇಬಿಹಾಳ ಮತಕ್ಷೇತ್ರದಿಂದ ಬಿಜೆಪಿ ಪಕ್ಷದ ಶಾಸಕರಾಗಿ ಆಯ್ಕೆಗೊಂಡಿದ್ದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಚಿವ ಸ್ಥಾನ ದೊರೆಯಬಹುದೆಂದು ಹೇಳಲಾಗಿತ್ತು. ಇದೀಗ ಸಿಎಂ ಯಡಿಯೂರಪ್ಪನವರು ನಿಗಮ ಮಂಡಳಿಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.