ವಿಜಯಪುರ: ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಜಲಾಯಶಯದ ಒಳ ಹರಿವು ಮತ್ತೆ ಹೆಚ್ಚಳವಾಗಿದೆ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕೃಷ್ಣಾನದಿಗೆ ಅಡ್ಡಲಾಗಿ ನಿರ್ಮಿಸಿರೋ ಲಾಲ್ ಬಹದ್ದೂರ್ ಶಾಸ್ತ್ರಿ ಡ್ಯಾಂ ಒಳ ಹರಿವಿನ ಪ್ರಮಾಣ ಹೆಚ್ಚಳವಾಗಿದ್ದು, ಹೊರ ಹರಿವನ್ನು ಸಹ ಹೆಚ್ಚಳ ಮಾಡಲಾಗಿದೆ. ನದಿಪಾತ್ರದ ಮೂಲಕ ಯಾದಗಿರಿಯ ಬಸವ ಸಾಗರಕ್ಕೆ ಹೆಚ್ಚುವರಿ ನೀರು ಬಿಡಲಾಗುತ್ತಿದೆ.
26 ಕ್ರಸ್ಟ್ಗೇಟ್ಗಳ ಮೂಲಕ 1.20 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಡ್ಯಾಂಗೆ 70 ಸಾವಿರ ಕ್ಯೂಸೆಕ್ ಒಳ ಹರಿವಿದ್ದು, 519.60 ಮೀಟರ್ ಎತ್ತರ ಸಾಮರ್ಥ್ಯದ ಡ್ಯಾಂನಲ್ಲಿ 519.54 ಮೀಟರ್ ನೀರು ಸಂಗ್ರಹವಾಗಿದೆ. ಡ್ಯಾಂ ಒಳ ಹರಿವು ಹಾಗೂ ಹೊರ ಹರಿವು ಹೆಚ್ಚಳವಾಗೋ ಸಾಧ್ಯತೆ ಇದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಕೆಬಿಜೆಎನ್ಎಲ್ ಆಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಣ್ಣೆ ನಗರಿಯಲ್ಲಿ ಮುಂದುವರೆದ ಮಳೆ ಅವಾಂತರ.. ಅಡಕೆ ತೋಟಗಳು ಜಲಾವೃತ, ಹೈರಾಣಾದ ರೈತ
ತುಂಬಿ ಹರಿಯುತ್ತಿರುವ ಭೀಮಾ: ಮಹಾರಾಷ್ಟ್ರದ ಉಜನಿ ಹಾಗೂ ವೀರ್ ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ಭೀಮಾ ನದಿಗೆ ಬಿಡಲಾಗಿದೆ. ಒಟ್ಟು 2,16,600 ಕ್ಯೂಸೆಕ್ ನೀರನ್ನು ಭೀಮಾ ನದಿಗೆ ಹರಿ ಬಿಡಲಾಗಿದೆ. ಪರಿಣಾಮ ಭೀಮಾ ನದಿಯ ಏಳು ಬಾಂದಾರ್ (ಬ್ರಿಡ್ಜ್ ಕಂ ಬ್ಯಾರೇಜ್) ಗಳು ಮುಳುಗಡೆಯಾಗಿವೆ. ಶಿರನಾಳ-ಔಜ್, ಗೋವಿಂದಪೂರ-ಬಂಡಾರಕವಟೆ, ಹಿಂಗಣಿ-ಆಳಗಿಚಣೇಗಾಂವ್ - ಬರೂರು, ಉಮರಾಣಿ-ಲವಗಿ, ಪಡನೂರು-ಖಾನಾಪುರಹಿಳ್ಳಿ-ಗುಬ್ಬೇವಾಡ ಬ್ಯಾರೇಜ್ ಗಳು ಜಲಾವೃತವಾಗಿವೆ. ನದಿ ತಟದಲ್ಲಿ ಎಚ್ಚರಿಕೆಯಿಂದ ಇರಬೇಕೆಂದು ಜನರಿಗೆ ಜಿಲ್ಲಾಡಳಿತ ಮನವಿ ಮಾಡಿದೆ.