ವಿಜಯಪುರ : ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ ಪಾಲಿಕೆಯ ಮುಖ್ಯದ್ವಾರಕ್ಕೆ ಬೀಗ ಜಡಿದು ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಸದಾ ಜನಜಂಗುಳಿಯಲ್ಲಿ ಕೆಲಸ ಮಾಡುತ್ತಿದ್ದ ಪಾಲಿಕೆ ನೌಕರರು ತಮ್ಮ ಎಲ್ಲ ಕೆಲಸ ಸ್ಥಗಿತಗೊಳಿಸಿ ಪ್ರತಿಭಟಿಸಿದರು.
ಕಳೆದ ನವೆಂಬರ್ 18ರಂದು ಮಧ್ಯಾಹ್ನ ಬಳೂಮಕರ ಕಲ್ಯಾಣ ಮಂಟಪ ಬಳಿ ರಸ್ತೆ ಕಾಮಗಾರಿ ವೀಕ್ಷಿಸುತ್ತಿದ್ದ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಅವರ ಮೇಲೆ ನಾಲ್ಕೈದು ಜನ ಕಿಡಿಗೇಡಿಗಳು ಜಗಳ ತೆಗೆದು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಪ್ರಕರಣ ಸಾಕಷ್ಡು ಸುದ್ದಿ ಮಾಡಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಜೆಡಿಎಸ್ ಕಾರ್ಯಕರ್ತೆಯ ಪುತ್ರನನ್ನು ಬಂಧಿಸಿದ್ದರು. ಸದ್ಯ ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.
ವಿಜಯಪುರ ಪಾಲಿಕೆ ನೌಕರರ ಪ್ರತಿಭಟನೆ : ಕರ್ತವ್ಯನಿರತ ಅಧಿಕಾರಿಯೊಬ್ಬರನ್ನು ಹಾಡುಹಗಲೇ ಹಲ್ಲೆ ನಡೆಸಿರುವುದು ಪಾಲಿಕೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಲು ಹೆದರುವಂತಾಗಿದೆ.
ಹೀಗಾಗಿ, ತಕ್ಷಣ ಘಟನೆಗೆ ಕಾರಣರಾದ ಆರೋಪಿಗಳನ್ನು ಬಂಧಿಸಬೇಕು ಎಂದು ಪ್ರತಿಭಟನಾನಿರತ ನೌಕರರು ಒತ್ತಾಯಿಸಿದರು. ಆಯುಕ್ತರ ಮೇಲೆ ನಡೆಸಿದ ಹಲ್ಲೆಯ ಆರೋಪಿಗಳನ್ನು ಬಂಧಿಸುವವರೆಗೂ ಪಾಲಿಕೆ ಕಚೇರಿ ಬೀಗ ತೆರೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.