ವಿಜಯಪುರ: ರಾಜ್ಯದಲ್ಲಿ ಹೆಚ್ಚು ಮತಾಂತರ ನಡೆಯುತ್ತಿದ್ದು, ಇದನ್ನು ತಡೆಯಲು ತಕ್ಷಣ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ಹಳ್ಳಿ ಹಳ್ಳಿಯಲ್ಲಿ ಕ್ರಿಶ್ಚಿಯನ್ ಮತಾಂತರ ನಡೆಯುತ್ತಿದೆ. ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಕೂಡ ಅಧಿವೇಶನದಲ್ಲಿ ಈ ವಿಚಾರವಾಗಿ ಹೇಳಿದ್ದಾರೆ. ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವಂತೆ ಒತ್ತಾಯಿಸುವುದಾಗಿ ತಿಳಿಸಿದರು.
ಇದುವರೆಗೂ ಬಡವರು, ಅನಕ್ಷರಸ್ಥರು, ಮುಂತಾದವರನ್ನು ಮತಾಂತರ ಮಾಡುತ್ತಿದ್ದರು. ಈಗ ಎಲ್ಲ ಸಮುದಾಯ, ವರ್ಗಗಳನ್ನು ಮತಾಂತರ ಮಾಡುತ್ತಿದ್ದಾರೆ. ದಾವಣಗೆರೆ, ಚಿತ್ರದುರ್ಗದ ಭಾಗದಲ್ಲಿ ಒಂದು ಲಕ್ಷಕ್ಕೂ ಅಧಿಕ ಲಿಂಗಾಯತರನ್ನು ಮತಾಂತರ ಮಾಡಲಾಗಿದೆ. ಶಾಮನೂರು ಶಿವಶಂಕರಪ್ಪ ಅವರು ಮತಾಂತರ ಆದವರನ್ನು ವಾಪಸ್ ತರುವಂತೆ ಸಮಾಜಕ್ಕೆ ಪತ್ರ ಬರೆದಿದ್ದಾರೆ, ನಾನು ಅದನ್ನು ಸ್ವಾಗತಿಸುತ್ತೇನೆ ಎಂದರು.
ಮತಾಂತರ ಮಾಡುವುದು ದೇಶದ್ರೋಹದ ಕೆಲಸ. ಲ್ಯಾಂಡ್ ಎನ್ನುವಂತಹದ್ದನ್ನು ಕನ್ವರ್ಟ್ ಮಾಡಿ, ಕ್ರಿಶ್ಚಿಯನ್ ಲ್ಯಾಂಡ್ ಎಂದು ಮಾಡ್ತಿದ್ದಾರೆ. ವಿಜಯಪುರ ಜಿಲ್ಲೆ ಸೇರಿದಂತೆ ಹಲವೆಡೆ ತಾಂಡಾಗಳನ್ನು ಪೂರ್ತಿಯಾಗಿ ಮತಾಂತರ ಮಾಡ್ತಿದ್ದಾರೆ. ಅವರನ್ನು ವಾಪಸ್ ತರುವ ಕೆಲಸ ಸೇವಾಲಾಲ್ ಸ್ವಾಮೀಜಿಗಳು ಮಾಡ್ತಿದ್ದಾರೆ. ಬೀದರ್, ಕಲಬುರಗಿ ಭಾಗದಲ್ಲಿ ಶೇಕಡಾ ಶೇ 60 ರಷ್ಟು ಮಾದಿಗ ಸಮಾಜದವರನ್ನು ಮತಾಂತರ ಮಾಡಿದ್ದಾರೆ ಎಂದರು.
ಇದನ್ನೂ ಓದಿ: ಭಾರತ, ಬಾಂಗ್ಲಾದೇಶದಲ್ಲಿ ಪ್ರಬಲ ಭೂಕಂಪ.. ಮಿಜೋರಾಂನಲ್ಲಿ ನಡುಗಿದ ಮನೆ!
ಮತಾಂತರ ಮಾಡುವವರಿಗೆ ಶ್ರೀ ರಾಮಸೇನೆ ಎಚ್ಚರಿಕೆ ನೀಡುತ್ತಿದೆ. ಇದೇ ಕೆಲಸ ಮುಂದುವರೆಸಿದರೆ ಸಿಕ್ಕಸಿಕ್ಕಲ್ಲಿ ಒದೆಯಬೇಕಾಗುತ್ತದೆ. ಕಾನೂನು ರಚನೆಯಾದ ಬಳಿಕ ಅದನ್ನು ಜಾರಿಗೆ ತರುವಂತಹ ಕೆಲಸವೂ ಆಗಬೇಕಿದೆ. ಮಠಾಧೀಶರೂ ಸಹ ಮಠವನ್ನು ಬಿಟ್ಟು ಹೊರಗೆ ಬಂದು ಕೇರಿಗಳಿಗೆ ಭೇಟಿ ನೀಡಿ, ಮತಾಂತರ ಆದವರನ್ನು ವಾಪಸ್ ತರುವ ಕೆಲಸ ಮಾಡಬೇಕು ಎಂದರು.
ಮಸೀದಿಯಲ್ಲಿ ಮೈಕ್ ಬಳಕೆ ನಿಷೇಧ:
ಮೈಕ್ ಬಳಕೆ ನಿಷೇಧಿಸುವಂತೆ ಸುಪ್ರೀಂಕೋರ್ಟ್ ಆದೇಶವಿದ್ದರೂ ಬೆಳಗ್ಗೆ ಐದು ಗಂಟೆಗೆ ನಮಾಜ್ ಶುರು ಆಗುತ್ತೆ, ಇದು ನ್ಯಾಯಾಲಯದ ಆದೇಶ ಉಲ್ಲಂಘನೆ. ಆದರೆ, ಪೊಲೀಸರು, ಕಾನೂನು ಬಾಯಿ ಮುಚ್ಚಿಕೊಂಡು ಕುಳಿತಿದೆ. ಸುಪ್ರೀಂಕೋರ್ಟ್ ಆದೇಶ ಇದ್ದರೂ ಯಾಕೆ ಮಸೀದಿಯಲ್ಲಿ ಮೈಕ್ ಬಂದ್ ಮಾಡ್ತಿಲ್ಲ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಮುಂಬೈ ದಾಳಿಗೆ 13 ವರ್ಷ... 26/11 ಉಗ್ರರ ಅಟ್ಟಹಾಸದ ಕರಾಳ ನೆನಪು
ಇದೇ ರೀತಿ ಕಾನೂನು ಉಲ್ಲಂಘನೆ ಆಗಿದ್ದನ್ನು ತಡೆಯಬೇಕು ಎಂದು ಈಗಾಗಲೇ ರಾಜ್ಯದ ಎಲ್ಲ ತಹಶೀಲ್ದಾರ್ಗಳಿಗೆ ಮನವಿ ಕೊಟ್ಟಿದ್ದೇವೆ. ಇನ್ಮುಂದೆ ಎಲ್ಲ ಡಿಸಿ ಕಚೇರಿಗಳ ಎದುರು ಹೋರಾಟ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಗಲಾಟೆಗಳಾಗಿ ಅನಾಹುತಗಳು ಆಗುವ ಮೊದಲು ಡಿಸಿಗಳು ಈ ವಿಚಾರವನ್ನು ಹದ್ದುಬಸ್ತಿನಲ್ಲಿ ಇಡಬೇಕು ಎಂದು ಮುತಾಲಿಕ್ ಒತ್ತಾಯಿಸಿದರು.