ಮುದ್ದೇಬಿಹಾಳ (ವಿಜಯಪುರ): ಸರಕಾರದ ಹಲವು ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಆಧಾರ್ ಕಾರ್ಡ್ ಕಡ್ಡಾಯ ಮಾಡದಿದ್ದರೂ ಅಗತ್ಯ ಎಂಬ ಕಾರಣಕ್ಕಾಗಿ ಹಲವು ದೋಷಗಳನ್ನು ಹೊಂದಿರುವ ಕಾರ್ಡ್ನ ತಿದ್ದುಪಡಿ ಸಲುವಾಗಿ ಜನರ ಪರದಾಟ ನಿಂತಿಲ್ಲ.
ತಹಶೀಲ್ದಾರ್ ಕಚೇರಿಗೆ ನಿತ್ಯವೂ ಬೆಳಗ್ಗೆಯೇ ಜನರು ಗುಂಪು - ಗುಂಪಾಗಿ ಬರುತ್ತಿದ್ದಾರೆ. ಕೋವಿಡ್-19 ಹಿನ್ನೆಲೆಯಲ್ಲಿ ನೋಂದಣಿ, ತಿದ್ದುಪಡಿ ಸ್ಥಗಿತವಾಗಿತ್ತು. ಆದರೆ, ಇದೀಗ ಲಾಕ್‌ಡೌನ್ ಸಡಿಲಿಕೆ ಬಳಿಕ ಆಧಾರ್ ಕಾರ್ಡ್ನ ನೋಂದಣಿ, ತಿದ್ದುಪಡಿ ಕಾರ್ಯವನ್ನು ಆರಂಭಿಸಲಾಗಿದೆ.
ಮುದ್ದೇಬಿಹಾಳ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರಿಗೆ ತಾಲೂಕಿನ ವಿವಿಧ ಗ್ರಾಮಗಳ ಜನರು 5 ಗಂಟೆಗೂ ಮುಂಚೆ ಬಂದು ಕಾಯುತ್ತಿರುವ ದೃಶ್ಯ ಕಂಡು ಬಂತು. ಸಾಮಾಜಿಕ ಅಂತರವನ್ನು ಮರೆತು ನೋಂದಣಿ, ತಿದ್ದುಪಡಿ ಕಾರ್ಯ ಮಾಡುವುದರಿಂದ ಸಮುದಾಯಕ್ಕೆ ಕೊರೊನಾ ಹಬ್ಬುವ ಆತಂಕವಿದೆ. ಈ ಬಗ್ಗೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು. ಇದಕ್ಕೆಂದು ಹಲವು ಮಾರ್ಗದರ್ಶಿ ಸೂಚನೆಗಳನ್ನು ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿವೆ.