ವಿಜಯಪುರ: ಹಾಡಹಗಲೇ ವೃದ್ಧನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಗರದ ಮೀನಾಕ್ಷಿ ವೃತ್ತದ ಗೋಡಮೊಳೆಯಲ್ಲಿ ನಡೆದಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ವಿನಯ್ ನಾಯಕ್ (68) ಎಂಬಾತನನ್ನು ಕೊಲೆ ಮಾಡಲಾಗಿದೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ದುಷ್ಕೃತ್ಯ ನಡೆದಿದೆ. ಹೊರಗೆ ಹೋಗಿದ್ದವರು ಮನೆಗೆ ಬಂದಾಗ ವಿಷಯ ಗೊತ್ತಾಗಿದೆ. ವೃದ್ಧ ರಕ್ತದ ಮಡುವಿನಲ್ಲಿ ಬಿದ್ದು ಕೊನೆಯುಸಿರೆಳೆದಿದ್ದಾನೆ. ಕಳ್ಳತನ ಮಾಡುವುದಕ್ಕೆ ಬಂದವರು ವೃದ್ಧನ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಎಸ್ಪಿ ಅನುಪಮ್ ಅಗರ್ವಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರದಲ್ಲಿ ನಡೆದಿರುವ ಈ ಘಟನೆ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ್ದು, ಗಾಂಧಿ ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.