ವಿಜಯಪುರ: ಕೈಗಾರಿಕೆಗಳಿಗೆ ಭೂಮಿ ನೀಡಿದ ರೈತರಿಗೆ ಸರಿಯಾದ ಪರಿಹಾರ ನೀಡಿಲ್ಲ ಹಾಗೂ ಭೂಮಿ ಪಡೆಯುವ ವೇಳೆ ನೀಡಿದ್ದ ಭರವಸೆ ಈಡೇರಿಸಿಲ್ಲ ಎಂದು ಆರೋಪಿಸಿ ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಮುಳವಾಡ ಗ್ರಾಮದಲ್ಲಿ ರೈತರು ಹೋರಾಟ ಆರಂಭಿಸಿದ್ದಾರೆ.
ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಕೊಲ್ಹಾರ ತಾಲೂಕಿನ ಮುಳವಾಡ ಹಾಗೂ ಮಲಘಾಣದ ಗ್ರಾಮಗಳ ಬಳಿ ಬೃಹತ್ ಕೈಗಾರಿಕಾ ಪ್ರದೇಶ ನಿರ್ಮಾಣವಾಗುತ್ತಿದೆ. ಒಟ್ಟು 3,239 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣವಾಗುತ್ತಿದ್ದು, ರೈತರಿಂದ ಜಮೀನನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಸ್ವಾಧೀನ ಮಾಡಿಕೊಳ್ಳುವ ವೇಳೆ ಒಣ ಬೇಸಾಯದ ಜಮೀನಿಗೆ ಪ್ರತಿ ಎಕರೆಗೆ 7.5 ಲಕ್ಷ ರೂ. ಹಾಗೂ ನೀರಾವರಿ ಜಮೀನಿಗೆ 9.5 ರಿಂದ 10 ಲಕ್ಷ ರೂಪಾಯಿ ಪ್ರತಿ ಎಕರೆಗೆ ನೀಡಲಾಗಿದೆ. ಈ ಪರಿಹಾರ ವಿಚಾರ ಇದೀಗ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ನಮ್ಮ ಜಮೀನನನ್ನು ಸ್ವಾಧೀನ ಮಾಡಿಕೊಳ್ಳುವ ವೇಳೆ ಸರ್ಕಾರ ಹಾಗೂ ಕೆಐಎಡಿಬಿ ಅಧಿಕಾರಿಗಳು ಭರವಸೆಗಳ ಮಹಾಪೂರನ್ನೇ ನೀಡಿದ್ದರು. ಆದರೆ, ಭರವಸೆಗಳು ಭರವಸೆಗಳಾಗಿಯೇ ಉಳಿದಿವೆ ಎಂದು ಆರೋಪಿಸಿ ಮುಳವಾಡ ಹಾಗೂ ಮಲಘಾಣ ಗ್ರಾಮದ ರೈತರು ಮುಳವಾಡ ಗ್ರಾಮ ಪಂಚಾಯಿತಿ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
2010ರಲ್ಲಿ ಇಲ್ಲಿನ ಒಟ್ಟು 3,239 ಎಕರೆ ರೈತರ ಜಮೀನುಗಳನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಕೆಐಡಿಬಿ ಮೂಲಕ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗಿದ್ದು, ಪರಿಹಾರ ಹಣವನ್ನೂ ಆಯಾ ರೈತರ ಖಾತೆಗೆ ಹಾಕಲಾಗಿದೆ. 130 ಎಕರೆ ಜಮೀನಿನ ಮಾಲೀಕತ್ವ ಹೊಂದಿರುವ ಕೆಲವು ರೈತರು ಪರಿಹಾರ ವಿಚಾರವಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆದಿದೆ. ಇನ್ನುಳಿದಂತೆ ಇಲ್ಲಿ ಸ್ವಾಧೀನಕ್ಕೆ ಒಳಪಟ್ಟ ರೈತರ ಜಮೀನುಗಳನ್ನು ನೀಡಿದ ಪ್ರತಿ ರೈತ ಕುಟುಂಬಕ್ಕೂ ಸರ್ಕಾರಿ ಕೆಲಸ ನೀಡುವುದಾಗಿ ಅಂದಿನ ಬಿಜೆಪಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಇಲ್ಲಿಯವರೆಗೂ ಯಾವುದೇ ರೈತ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡಿಲ್ಲ ಎಂದು ಭೂಮಿ ನೀಡಿರುವ ರೈತ ಅಬ್ದುಲ್ ರಜಾಕ್ ಹೇಳಿದರು.
ಇದನ್ನೂ ಓದಿ: ಪ.ಪಂಗಡ ಮೀಸಲು ಬೇಡಿಕೆಗೆ ಹೆಚ್ಡಿಕೆ ಬೆಂಬಲ: ಕಲಾಪದಲ್ಲಿ ಪ್ರಸ್ತಾಪಿಸುವ ಭರವಸೆ
ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ರೈತರ ಭೂಮಿಗೆ ನೀಡಿದ ಮಾದರಿಯಲ್ಲೇ ನಮಗೂ ಪರಿಹಾರ ನೀಡಬೇಕು. ಪ್ರತಿ ಎಕರೆ ಭೂಮಿಗೂ ಹೆಚ್ಚುವರಿ 2.80 ಲಕ್ಷ ರೂಪಾಯಿಗಳನ್ನು ನೀಡಬೇಕು. ಹಲವಾರು ರೈತರ ಪಾಲಿನ ಹಣ ಇನ್ನೂ ಸಂದಾಯವಾಗಿಲ್ಲ. ಹಣಕ್ಕಾಗಿ ಧಾರವಾಡ ಕೆಐಎಡಿಬಿ ಕಚೇರಿಗೆ ಅಲೆದಾಡುವಂತಾಗಿದೆ. ಈ ಅಲೆದಾಟ ತಪ್ಪಬೇಕು. ನಮ್ಮ ಮನೆ ಬಾಗಿಲಿಗೆ ಹಣ ತಲುಪಬೇಕು. ಅಲ್ಲಿಯವರೆಗೂ ಕೈಗಾರಿಕಾ ಪ್ರದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಲು ನಾವು ಬಿಡುವುದಿಲ್ಲ ಎಂದು ಭೂಮಿ ನೀಡಿರುವ ಇನ್ನೊಬ್ಬ ರೈತ ಬಸವರಾಜ್ ಹೇಳಿದರು.