ಮುದ್ದೇಬಿಹಾಳ: ತಮಗಿರುವ ಜಮೀನಿನಲ್ಲಿ ಬಿತ್ತಿದ ಬೆಳೆಯ ಕಟಾವಿಗೆ ಕೂಲಿ ಕಾರ್ಮಿಕರ ಕೊರತೆ ಎದುರಾದಾಗ ರೈತರೊಬ್ಬರು ತಮ್ಮ ಕಾರನ್ನೇ ಕೃಷಿ ಚಟುವಟಿಕೆಗೆ ಬಳಸಿ ಇತರೇ ರೈತರಿಗೆ ಮಾದರಿಯಾಗಿದ್ದಾರೆ.
ತಾಲೂಕಿನ ಶಿರೋಳ ಗ್ರಾಮದಲ್ಲಿ ಜಮೀನು ಹೊಂದಿರುವ ರೈತ ಮುತ್ತಣ್ಣ ಪ್ಯಾಟಿಗೌಡರ ಅವರೇ ಈ ವಿನೂತನ ಕೆಲಸಕ್ಕೆ ಕೈ ಹಾಕಿ ಯಶಸ್ವಿಯಾದವರು. ತಮಗಿರುವ 12 ಎಕರೆ ಜಮೀನಿನಲ್ಲಿ 3.50 ಎಕರೆ ಜಮೀನಿನಲ್ಲಿ ಅಜವಾನ ಬೆಳೆಯನ್ನು ಬಿತ್ತಿದ್ದರು. ಅದು ಕೊಯ್ಲಿಗೆ ಬಂದ ಬಳಿಕ ಒಂದೆಡೆ ಕೂಲಿಕಾರ್ಮಿಕರಿಂದ ಗೂಡು ಹಾಕಿಸಿದ್ದರು.
ಈಗ ಅಜವಾನ ಗಿಡದಿಂದ ಬೇರ್ಪಡಿಸಬೇಕಾದರೆ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಆಳುಗಳ ಅವಶ್ಯಕತೆ ಇತ್ತು. ಆದರೆ, ಕೂಲಿ ಆಳುಗಳು ಸಿಗದ ಕಾರಣ ಇದಕ್ಕೆ ಪರ್ಯಾಯವಾಗಿ ಏನಾದರೊಂದು ಮಾಡಬೇಕು ಎಂದು ಆಲೋಚಿಸಿ ಮೊಬೈಲ್‌ನಲ್ಲಿ ಕೃಷಿ ಚಟುವಟಿಕೆಗೆ ಸಂಬಂಧಿಸಿದ ವಿಡಿಯೋವೊಂದನ್ನು ವೀಕ್ಷಿಸಿ ಅದನ್ನು ಅನುಷ್ಠಾನಕ್ಕೆ ತಂದಿದ್ದಾರೆ.
ಹತ್ತು ಕಾರ್ಮಿಕರ ಕೆಲಸ ಒಂದೇ ಕಾರಿನಿಂದ :
ಹತ್ತಕ್ಕೂ ಹೆಚ್ಚು ಕೂಲಿಕಾರ್ಮಿಕರಿಂದ ಅಜವಾನ ಬೆಳೆಯನ್ನು ಗಿಡದಿಂದ ಬೇರ್ಪಡಿಸಲು ಕರೆತರಬೇಕಿತ್ತು. ಆದರೆ, ತಮ್ಮಲ್ಲಿದ್ದ ಕಾರನ್ನೇ ಹೊಲಕ್ಕೆ ತೆಗೆದುಕೊಂಡು ಹೋದ ರೈತ ಮುತ್ತಣ್ಣ ಅವರು, ಕಾರಿನ ಸಹಾಯದಿಂದ ಅಜವಾನ ಗಿಡದಿಂದ ಬೇರ್ಪಡಿಸಿದ್ದಾರೆ. ಈ ಕಾರ್ಯಕ್ಕೆ ಕೇವಲ 5 ಕೂಲಿ ಕಾರ್ಮಿಕರನ್ನು ಬಳಸಿಕೊಂಡಿದ್ದಾರೆ. ಶಿರೋಳದ ಈ ರೈತ ಅಜವಾನ ಬೆಳೆಯ ರಾಶಿಗೆ ಕೈಗೊಂಡಿರುವ ಹೈಟೆಕ್ ವಿಧಾನ ಇತರ ರೈತರಿಗೂ ಅನುಕೂಲಕರವಾಗಿದೆ. ಅಲ್ಲದೇ ಕಾರ್ಮಿಕರ ಮನೆಗಳಿಗೆ ಅಲೆಯಬೇಕಿಲ್ಲ. ಹೊಲದ ಮಾಲೀಕರೇ ಸ್ವಲ್ಪ ಶ್ರಮ ಹಾಕಿದರೂ ಬೆಳೆ ಮಾತ್ರ ಪೂರ್ತಿ ಕೈ ಸೇರುವ ನಂಬಿಕೆಯೂ ಇರುತ್ತದೆ.