ಮುದ್ದೇಬಿಹಾಳ: ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವ ಬಲಿದಾನಗೈದ ಮುಸ್ಲಿಂ ಹೋರಾಟಗಾರರನ್ನು ಸರಕಾರ ಸ್ಮರಿಸದೇ ಇರುವುದು ತೀವ್ರ ಕಳವಳಕಾರಿ ಸಂಗತಿ. ಇನ್ನಾದರೂ ಸರಕಾರ ಅಂತಹ ಹೋರಾಟಗಾರರನ್ನು ಸಮಾಜಕ್ಕೆ ನೆನಪಿಸುವ ಕಾರ್ಯ ಮಾಡಬೇಕು ಎಂದು ಮೌಲಾನಾ ಅಲ್ಲಾಭಕ್ಷ ಖಾಜಿ ಹೇಳಿದರು.
ಪಟ್ಟಣದ ಜಮಿಯತ್ ಉಲಮಾ ಹಿಂದ್ ಶಾಖೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಎಲ್ಲ ಮಸೀದಿಗಳ ಇಮಾಮರ ಸಭೆಯಲ್ಲಿ ಅವರು ಮಾತನಾಡಿದರು. 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸರಕಾರದ ಆದೇಶವಾಗಿರುವ ಹರ್ ಘರ್ ತಿರಂಗಾ ಅಭಿಯಾನವನ್ನು ಪ್ರತಿಯೊಬ್ಬರೂ ಆಚರಿಸಬೇಕೆಂದು ಮೌಲಾನಾ ಅಫ್ತಾಬ್ ಆಲಂ ಹೇಳಿದರು. ಸ್ವಾತಂತ್ರ‍್ಯಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಹೋರಾಟಗಾರರೂ ಕೂಡಾ ತಮ್ಮ ಪ್ರಾಣ ಬಲಿ ಕೊಟ್ಟಿದ್ದಾರೆ. ದೇಶಕ್ಕೆ ಆಪತ್ತು ಬಂದಾಗ ದೇಶದ ರಕ್ಷಣೆಗೆ ಸದಾ ಸನ್ನದ್ಧರಾಗಿದ್ದಾರೆ ಎಂದರು.
ಬಳಿಕ ಮೌಲಾನಾ ಹುಸೇನ್ ಉಮ್ರಿ ಮಾತನಾಡಿ, ಆ.13 ರಿಂದ 15ರವರೆಗೆ ಪ್ರತಿ ಮನೆಗಳ ಮೇಲೂ ರಾಷ್ಟ್ರಧ್ವಜ ಹಾರಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಜಮಿಯತೆ ಉಲಮಾ ಹಿಂದ್ ಶಾಖೆಯ ಅಧ್ಯಕ್ಷ ಖಾರಿ ಇಸ್ಸಾಕ್ ಮಾಗಿ, ಮೌಲಾನಗಳಾದ ಮೊಹಮ್ಮದ್ ಸಾದಿಕ್ ಬಾಗಲಕೋಟ್, ಇಬ್ರಾಹಿಂ ಬಿಜ್ಜರಗಿ,ಆಲಂ ಖಾನ್,ರಫೀಕ ನದಾಫ, ಇಸ್ಮಾಯಿಲ್ ಬಾಗವಾನ, ಹನಿಫ ನದಾಫ, ಜಕ್ಕವಾನ ಒಂಟಿ, ಅಬುಬಕರ್ ಮುಜಾವರ್, ಅಶಾದುಲ್ಲಾ ಬಿಜ್ಜರಗಿ ಉಪಸ್ಥಿತರಿದ್ದರು.
ಇದನ್ನೂ ಓದಿ: ನ್ಯೂಯಾರ್ಕ್ನಲ್ಲಿ ಭಾರತೀಯ ಲೇಖಕ ಸಲ್ಮಾನ್ ರಶ್ದಿ ಮೇಲೆ ಮಾರಣಾಂತಿಕ ಹಲ್ಲೆ