ವಿಜಯಪುರ: ಡೋಣಿ ನದಿ ನೆರೆ ಹಾವಳಿಯಿಂದ ತುತ್ತಾದ ಗ್ರಾಮಗಳಿಗೆ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಭೇಟಿ ನೀಡಿ, ಸುರಕ್ಷಾ ಕ್ರಮಗಳನ್ನು ಹಾಗೂ ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಬಲೇಶ್ವರ ತಾಲೂಕಿನ ದಾಶ್ಯಾಳ, ಕೊಟ್ಯಾಳ ಮತ್ತು ಸಾರವಾಡ ಗ್ರಾಮಗಳಿಗೆ ಭೇಟಿ ನೀಡಿ, ನೆರೆ ಹಾವಳಿಯಿಂದ ಸಿಲುಕಿದ ಪ್ರದೇಶಗಳಲ್ಲಿ ವಸ್ತುಸ್ಥಿತಿ ಅವಲೋಕಿಸಿದ ಅವರು ಈ ಹಿಂದೆ ಕೂಡ ಈ ಗ್ರಾಮಸ್ಥರು ಭೀಕರ ಪ್ರವಾಹದಲ್ಲಿ ಸಿಲುಕಿದ್ದಾರೆ. ಈಗ ಕೊರೊನಾ ಕಾಯಿಲೆ ಕೂಡ ಸಮಸ್ಯೆ ಉಂಟುಮಾಡಿದೆ. ಇಂಥಹ ಪರಿಸ್ಥಿತಿಯಲ್ಲಿ ಮತ್ತೆ ನೆರೆಹಾವಳಿ ಎದುರಾದರೆ, ಜೀವನ ನಡೆಸುವದು ಕಷ್ಟವಾಗುತ್ತದೆ. ಅದಕ್ಕೆ ಹಾನಿ ಉಂಟಾಗಿರುವ ಪ್ರದೇಶವನ್ನು ಕೂಡಲೇ ಸಮೀಕ್ಷೆ ಮಾಡಿ, ಯಾರೊಬ್ಬರಿಗೂ ಅನ್ಯಾಯವಾಗದಂತೆ ಸೂಕ್ತ ಫಲಾನುಭವಿಗೆ ಪರಿಹಾರ ದೊರಕುವಂತೆ ನೋಡಿಕೊಳ್ಳಿ ಎಂದು ಹೇಳಿದರು.
ತಿಕೋಟಾ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎಸ್. ರಾಠೋಡ, ಬಬಲೇಶ್ವರ ತಹಶೀಲ್ದಾರ ಮಲ್ಲಿಕಾರ್ಜುನ ಅರಕೇರಿ, ಬಬಲೇಶ್ವರ ಕಂದಾಯ ನೀರಿಕ್ಷಕ ಸುಧೀಂದ್ರ ಗುಮಾಸ್ತೆ, ಗ್ರಾಮ ಲೆಕ್ಕಾಧಿಕಾರಿಗಳಾದ ವಿನಯ ಕುಲಕರ್ಣಿ, ರವಿಪ್ರಕಾಶ ಕಾಂಬಳೆ ಇದ್ದರು.
ಡಿಸಿ ಜತೆ ಎಂಬಿಪಿ ಮಾತುಕತೆ:
ಇದಕ್ಕೂ ಮುನ್ನ ಮಾಜಿ ಸಚಿವ ಹಾಗೂ ಹಾಲಿ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ನೆರೆ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಜತೆ ದೂರವಾಣಿ ಮೂಲಕ ಮಾತನಾಡಿ, ಅತಿವೃಷ್ಠಿಯಿಂದಾಗಿ ಬಬಲೇಶ್ವರ ಕ್ಷೇತ್ರದ ದಾಶ್ಯಾಳ, ತೊನಶ್ಯಾಳ, ಕೊಟ್ಯಾಳ ಹಾಗೂ ಸಾರವಾಡ ಗ್ರಾಮಗಳಲ್ಲಿ ನೆರೆ ಹಾವಳಿ ಹೆಚ್ಚುತ್ತಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಗ್ರಾಮಸ್ಥರಿಗೆ ಸುರಕ್ಷಾ ಕ್ರಮಗಳನ್ನು ಅನುಸರಿಸಲು ಸೂಚಿಸುವುದು ಹಾಗೂ ಅಗತ್ಯ ನೆರವು ಕ್ರಮಗಳನ್ನು ಕೂಡಲೇ ಕೈಗೊಳ್ಳುವಂತೆ ಮನವಿ ಮಾಡಿದರು. ನೆರೆ ಹಾವಳಿ ಕುರಿತು ಅಗತ್ಯ ಕ್ರಮ ತಕ್ಷಣವೇ ಕೈಗೊಳ್ಳುವಂತೆ ಸೂಚಿಸಿದರು.