ಮುದ್ದೇಬಿಹಾಳ(ವಿಜಯಪುರ): ಎಂ.ಬಿ.ಪಾಟೀಲರು ಆಧುನಿಕ ಭಗೀರಥರೆಂದು ಕರೆಯಿಸಿಕೊಳ್ಳುತ್ತಿದ್ದಾರೆ. ಹೀಗೆ ಕರೆಯಿಸಿಕೊಳ್ಳುವುದಕ್ಕೆ ಅಭ್ಯಂತರವಿಲ್ಲ, ಆದರೆ ಜನರ ಕನಸನ್ನು ನನಸು ಮಾಡಲಿ. ಆಶ್ವಾಸನೆ ಬರೀ ಮಾತಿಗಷ್ಟೇ ಸೀಮಿತವಾಗದಿರಲಿ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ನೀರಾವರಿ ಸೌಲಭ್ಯ ಹತ್ತು ಲಕ್ಷ ಜನರ ಕನಸಾಗಿದೆ. ಕೇವಲ ಇವರೊಬ್ಬರ ಸ್ವತ್ತಲ್ಲ ಎಂದು ಟೀಕಿಸಿದರು. ಕಾಂಗ್ರೆಸ್ ಸರಕಾರದಲ್ಲಿ ಎಂ.ಬಿ.ಪಾಟೀಲರು ನೀರಾವರಿ ಸಚಿವರಾದಾಗ ಎಲ್ಲ ಯೋಜನೆಗಳು ಪೂರ್ಣಗೊಳ್ಳುತ್ತವೆ ಎಂದು ಸಂತಸಗೊಂಡಿದ್ದೆವು. ಆದರೆ ನಿರೀಕ್ಷೆ ಹುಸಿಯಾಗಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಹೆಚ್ಚಿನ ಅನುದಾನ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ದೊರೆತಿದೆ. ಅದಕ್ಕೆ ಮಾಜಿ ಜಲಸಂಪನ್ಮೂಲ ಸಚಿವರು ಕೃತಜ್ಞತೆ ಸಲ್ಲಿಸಬೇಕಿತ್ತು ಎಂದು ಹೇಳಿದರು.
ಜಿಲ್ಲೆಯನ್ನು ಪೂರ್ಣ ನೀರಾವರಿಗೆ ಒಳಪಡಿಸುವ ಉದ್ದೇಶದಿಂದ ತಮ್ಮ ಕನಸಿನ ಹಳ್ಳ ತುಂಬುವ ಯೋಜನೆ ಕುರಿತು ಸಲ್ಲಿಸಿದ್ದ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅಸ್ತು ಎಂದಿದೆ ಎಂದು ಹೇಳುತ್ತಿರುವ ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರು ಇದಕ್ಕಾಗಿ ಸಿಎಂ ಯಡಿಯೂರಪ್ಪ, ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಅಭಿನಂದಿಸುವ ಮಾತು ಹೇಳಬೇಕಿತ್ತು ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾಜಿ ಸಚಿವರಿಗೆ ಟಾಂಗ್ ಕೊಟ್ಟಿದ್ದಾರೆ.
2018ರ ಚುನಾವಣೆಗೂ ಮುನ್ನ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಪಡೆಕನೂರ ಕೆರೆಯನ್ನು ತುಂಬಿಸಲಾಗುವುದೆಂದು ಒಂದು ದಿನ ನೀರು ಹರಿಸಿ ಮುಂದೆ ಕೈ ಬಿಟ್ಟರು. ಈಗ ನನ್ನ ಅವಧಿಯಲ್ಲಿ ಪ್ರಸ್ತಾವನೆ ಸಲ್ಲಿಸಿ ಕೆರೆ ತುಂಬಲು ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.