ಮುದ್ದೇಬಿಹಾಳ : ಪಟ್ಟಣದಲ್ಲಿ ರಸ್ತೆ, ಚರಂಡಿ ಕೆಲಸ ಮಾಡುತ್ತೇವೆ ಎಂದರೆ ಯಾರೂ ಅಡ್ಡಿ ಮಾಡುವುದಿಲ್ಲ. ನೀವು ಇಲ್ಲ-ಸಲ್ಲದ ಸುಳ್ಳು ಹೇಳುವುದನ್ನು ಬಿಟ್ಟು ಮೊದಲು ಹಿಡಿದಿರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿ ಎಂದು ಅಶೋಕ ಬಿಲ್ಡಕಾನ್ ಅಧಿಕಾರಿಯ ವಿರುದ್ಧ ಆಹಾರ ಪೂರೈಕೆ ನಿಗಮದ ಅಧ್ಯಕ್ಷರೂ ಆದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಹರಿಹಾಯ್ದಿರುವ ಘಟನೆ ಪಟ್ಟಣದಲ್ಲಿ ಗುರುವಾರ ಸಂಜೆ ನಡೆದಿದೆ.
ಅಶೋಕ ಬಿಲ್ಡಕಾನ್ದ ಪ್ರಾದೇಶಿಕ ವಿಭಾಗದ ಮುಖ್ಯಸ್ಥ ರಾಮಬಾಲಕೃಷ್ಣ ಈ ಬಗ್ಗೆ ಮಾಧ್ಯಮದವರಿಗೆ ಸ್ಪಷ್ಟನೆ ನೀಡುತ್ತಿದ್ದಂತೆ ಮಧ್ಯ ಪ್ರವೇಶ ಮಾಡಿದ ಶಾಸಕರು, ಈ ರೀತಿ ಸುಳ್ಳು ಹೇಳುವುದನ್ನು ಬಿಡಿ. ನಮ್ಮೂರಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಲಾಗುತ್ತಿದೆ. ಎಲ್ಲಿಯೂ ಪೊಲೀಸರನ್ನು ಮುಂದೆ ನಿಲ್ಲಿಸಿ ಕೆಲಸ ಮಾಡಿಸಿರುವ ಉದಾಹರಣೆ ಇಲ್ಲ. ನಮ್ಮ ಜನ ಅಭಿವೃದ್ಧಿಗೆ ಸಹಕಾರ ಮಾಡುವವರಿದ್ದಾರೆ. ಏನಾದರೊಂದು ಹೇಳಿ ನುಣಚಿಕೊಳ್ಳುವ ಕೆಲಸ ಮಾಡಬೇಡಿ ಎಂದು ಹರಿಹಾಯ್ದರು.
ಅಲ್ಲದೇ ದೊಡ್ಡ ದೊಡ್ಡ ಕಂಪನಿಯ ಹೆಸರಿನಲ್ಲಿ ನಡೆಯುವ ಕೆಲಸಗಳು ಸರಿಯಾಗಿ ಆಗುವುದಿಲ್ಲ ಎಂಬ ಸಾರ್ವಜನಿಕರ ಆರೋಪವನ್ನು ನಿಮ್ಮ ಮಾತುಗಳೇ ಪುಷ್ಟಿಕರಿಸುತ್ತವೆ ಎಂದು ಸಿಡಿಮಿಡಿಗೊಂಡರು. ಒಂದು ವೇಳೆ ಸರಿಯಾಗಿ ಕೆಲಸ ಮಾಡದಿದ್ದರೆ ಡಿಸಿಎಂ ಗೋವಿಂದ ಕಾರಜೋಳ ಅವರೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳಲು ಸೂಚಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೆಆರ್‌ಡಿಸಿಎಲ್ ಅಧಿಕಾರಿಗಳಿಗೆ ಹೇಳಿ ಬಾಕಿ ಉಳಿದಿರುವ ಕೆಲಸಗಳನ್ನು ತ್ವರಿತವಾಗಿ ಮಾಡಲು ಸೂಚಿಸುವುದಾಗಿ ತಪಾಸಣಾ ಅಧಿಕಾರಿ ಪ್ರಕಾಶ ಎಂಬುವರು ತಿಳಿಸಿದ ಬಳಿಕ ಶಾಸಕರು ತಣ್ಣಗಾದರು. ಈ ವೇಳೆ ಸಮಾಜ ಸೇವಕ ಶಾಂತಗೌಡ ಪಾಟೀಲ್ ನಡಹಳ್ಳಿ, ಇಂಗಳಗೇರಿ ಗ್ರಾ.ಪಂ ಅಧ್ಯಕ್ಷ ರಾಜಶೇಖರ ಕರಡ್ಡಿ, ಕೆಆರ್‌ಡಿಸಿಎಲ್ ಇಇ ಎಸ್.ಎಸ್.ಅಂಗಡಿ, ಪ್ರೊಜೆಕ್ಟ್ ಮ್ಯಾನೇಜರ್ ಗಿರೀಶ, ಸಿಪಿಐ ಆನಂದ ಇದ್ದರು.