ವಿಜಯಪುರ : ಜಾತಿನಿಂದನೆ ಮತ್ತು ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ಸಚಿವ ಡಿ. ಸುಧಾಕರ್ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರ ಸಂವಿಧಾನ ವಿರೋಧಿ ನಡವಳಿಕೆ ಸರಿಯಲ್ಲ. ದಲಿತರ ಮೇಲೆ ಸರ್ಕಾರಕ್ಕೆ ಎಷ್ಟು ಗೌರವ ಇದೆ ಎಂಬುದು ಇದರಿಂದ ಗೊತ್ತಾಗುತ್ತದೆ. ಈ ಕೂಡಲೇ ಸುಧಾಕರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರಾಜೀನಾಮೆ ಕೊಡದಿದ್ದರೆ ಮುಖ್ಯಮಂತ್ರಿಗಳು ಅವರನ್ನು ವಜಾ ಮಾಡಬೇಕು. ಸರ್ಕಾರಕ್ಕೆ ನಿಜವಾಗಿಯೂ ದಲಿತರ ಮೇಲೆ ಕಳಕಲಿ ಇದ್ದರೆ ಸಚಿವರಿಂದ ರಾಜೀನಾಮೆ ಪಡೆಯಲಿ ಇಲ್ಲವೇ ವಜಾ ಮಾಡಲಿ ಎಂದು ಹೇಳಿದರು.
ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ್, ಸಿದ್ದರಾಮಯ್ಯ ಅವರು ಜೀವಂತ ಬಂದರೂ ನಾವು ಬಿಜೆಪಿಗೆ ತೆಗೆದುಕೊಳ್ಳುವುದಿಲ್ಲ. ಅವರು ಬಿಜೆಪಿಗೆ ಸೇರ್ಪಡೆ ಮಾಡುವಂತೆ ಅಂಗಲಾಚಿದರೂ ನಾವು ತೆಗೆದುಕೊಳ್ಳುವುದಿಲ್ಲ. ಅವರ ಅವಶ್ಯಕತೆ ನಮಗೆ ಇಲ್ಲ ಎಂದು ಹೇಳಿದರು.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ಜೆಡಿಎಸ್ ನಾಯಕರು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ಯಾವುದೇ ಮೈತ್ರಿಯಾದರೆ ಒಂದು ಪಕ್ಷದಲ್ಲಿ ಎಲ್ಲರ ಸರ್ವಾನುಮತ ಇರುವುದಿಲ್ಲ. ಕೆಲವೊಂದು ವಿಚಾರದಲ್ಲಿ ಭಿನ್ನಾಭಿಪ್ರಾಯ ಇರುತ್ತದೆ. ಕುಮಾರಸ್ವಾಮಿ ಮತ್ತು ದೇವೇಗೌಡರು ಇದನ್ನು ನಿಭಾಯಿಸುವಷ್ಟು ಸಮರ್ಥರಿದ್ದಾರೆ ಎಂದು ಹೇಳಿದರು.
ಸನಾತನ ಧರ್ಮ ವಿವಾದದ ಬಗ್ಗೆ ಮಾತನಾಡಿ, ಸನಾತನ ಧರ್ಮದ ಬಗ್ಗೆ ಮಾತನಾಡುವವರು ನಾಶವಾಗಿ ಹೋಗುತ್ತಾರೆ. ಸನಾತನ ಧರ್ಮ ನಾಶ ಮಾಡಬೇಕು ಎನ್ನುವವರು ಕ್ಯಾನ್ಸರ್, ಏಡ್ಸ್ ಇದ್ದಂತೆ. ಸನಾತನ ಧರ್ಮದ ಪರವಾಗಿ ಆದಿಚುಂಚನಗಿರಿ ಮಠದ ಸ್ವಾಮಿಗಳು, ಮೂರು ಸಾವಿರ ಮಠದ ಗುರುಗಳು ಮಾತನಾಡಿದ್ದಾರೆ. ಉಳಿದವರು ಯಾರೂ ಮಾತನಾಡಿಲ್ಲ, ಎಲ್ಲ ಸ್ವಾಮೀಜಿಗಳು ಹಿಂದೂ ಧರ್ಮದ ಬಗ್ಗೆ ಧ್ವನಿ ಎತ್ತಬೇಕು ಎಂದು ಹೇಳಿದರು.
ಹರಿಪ್ರಸಾದ್ ಪರೋಕ್ಷ ವಾಗ್ದಾಳಿಗೆ ಪ್ರತಿಕ್ರಿಯಿಸಿ, ಡಿಸಿಎಂ ಡಿಕೆ ಶಿವಕುಮಾರ್‌ಗೆ ತಾಕತ್ತಿದ್ದರೆ ಬಿ ಕೆ ಹರಿಪ್ರಸಾದ್ ವಿರುದ್ಧ ಕ್ರಮತೆಗೆದುಕೊಳ್ಳಲಿ. ಬಿ ಕೆ ಹರಿಪ್ರಸಾದ್ ಕಾಂಗ್ರೆಸ್‌ನ ಹಿರಿಯ ನಾಯಕರು. ಅವರನ್ನು ಡಿಕೆಶಿ ಉಚ್ಚಾಟನೆ ಮಾಡಲಿ ಎಂದು ಸವಾಲ್ ಹಾಕಿದರು.
ಮತ್ತೆ ಪಂಚಮಸಾಲಿ ಹೋರಾಟ : ಪಂಚಮಸಾಲಿ ಮೀಸಲಾತಿಗಾಗಿ ನಡೆಸಿದ ಹೋರಾಟ ಒಂದು ಹಂತಕ್ಕೆ ತಲುಪಿದೆ. ಇನ್ನೇನಿದ್ದರೂ ವಿಜಯಾನಂದ ಕಾಶಪ್ಪನವರ್, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ವಿನಯ ಕುಲಕರ್ಣಿ ಇದ್ದಾರೆ. ಅವರ ಸರ್ಕಾರವಿರುವ ಕಾರಣ ಮುಂದೆ ಏನಾದರೂ ಆಗಬೇಕಾದರೆ ಅವರನ್ನೇ ಕೇಳಬೇಕು. ನಮ್ಮ ಸರ್ಕಾರವಿದ್ದಾಗ ನೋಟಿಫಿಕೇಷನ್ ಮಾಡಿದ್ದೇವೆ. ರಾಜ್ಯಪಾಲರ ಸುಗ್ರೀವಾಜ್ಞೆ ಆಗಿದೆ. ಈಗ ಅದನ್ನು ಜಾರಿಗೊಳಿಸುವುದು ಕಾಂಗ್ರೆಸ್ ಸರ್ಕಾರದ ಕೆಲಸ ಎಂದು ಯತ್ನಾಳ್ ಹೇಳಿದರು.
ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದ ಬಿ ಕೆ ಹರಿಪ್ರಸಾದ್ಗೆ ಶೋಕಾಸ್ ನೊಟೀಸ್