ಮುದ್ದೇಬಿಹಾಳ: ಕಳೆದ ಎರಡೂವರೆ ತಿಂಗಳಿನಿಂದ ಕೋವಿಡ್-19ನಿಂದಾಗಿ ಸಾಮೂಹಿಕ ಪ್ರಾರ್ಥನಾ ಸ್ಥಳಗಳನ್ನು ಬಂದ್ ಮಾಡಲಾಗಿತ್ತು. ಹೀಗಾಗಿ ಮುಸ್ಲಿಂ ಬಾಂಧವರು ಮಸೀದಿ ಬದಲಿಗೆ ತಮ್ಮ ಮನೆಗಳಲ್ಲಿಯೇ ನಮಾಜ್ ಮಾಡುವ ಮೂಲಕ ಸರ್ಕಾರ ಆದೇಶವನ್ನು ಪಾಲಿಸಿದ್ದರು. ಜೂ.8 ರಿಂದ ಲಾಕ್‌ಡೌನ್ ಸಡಿಲಿಸಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಮಾಡಿಕೊಟ್ಟಿದ್ದು, ಮುದ್ದೇಬಿಹಾಳ ಪಟ್ಟಣದ ವಿವಿಧ ಮಸೀದಿಗಳಲ್ಲಿ ಶುಕ್ರವಾರದ ನಮಾಜ್‌ನ್ನು ಸರ್ಕಾರದ ನಿರ್ದೇಶನಗಳನ್ನು ಅನುಸರಿಸುವ ಮೂಲಕ ಮಾಡಲಾಯಿತು.
ಮಾಸ್ಕ್ ವಿತರಿಸಿದ ಮಸೀದಿ ಆಡಳಿತ ಮಂಡಳಿ: ಕೊರೊನಾ ವೈರಸ್ ತಡೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿರುವ ವಿವಿಧ ಮಸೀದಿಗಳ ಆಡಳಿತ ಮಂಡಳಿಗಳ ಸದಸ್ಯರು ಸಾಮೂಹಿಕ ಪ್ರಾರ್ಥನೆಯ ವೇಳೆಯೂ ಮುನ್ನೆಚ್ಚರಿಕೆ ವಹಿಸಿದ್ದಾರೆ. ಪಟ್ಟಣದ ಮಹಿಬೂಬ ನಗರದ ಮಕ್ಕಾ ಮಸೀದಿಯಲ್ಲಿ ಶುಕ್ರವಾರದಂದು ಸಾಮೂಹಿಕ ಪ್ರಾರ್ಥನೆಗೂ ಮುನ್ನ ಪ್ರಾರ್ಥನೆಗೆ ತೆರಳುವವರಿಗೆ ಉಚಿತವಾಗಿ ಮಾಸ್ಕ್ ವಿತರಿಸಿದರು. ಅಲ್ಲದೇ ಸ್ಯಾನಿಟೈಸರ್ ಬಳಸಿ ಪರಸ್ಪರ ಸಾಮಾಜಿಕ ಅಂತರ ಪಾಲನೆಯೊಂದಿಗೆ ನಮಾಜ್ ಮಾಡಲಾಯಿತು.
ಈ ವೇಳೆ ಮಸೀದಿಯ ಆಡಳಿತ ಮಂಡಳಿ ಪದಾಧಿಕಾರಿಗಳಾದ ಮಹಿಬೂಬ ಟಕ್ಕಳಕಿ, ಅಂಜುಮನ್ ಇಸ್ಲಾಂ ಕಮಿಟಿ ಸದಸ್ಯ ಹಾಜಿ ತೆಗ್ಗಿ, ಬಾಬು ಗೊಳಸಂಗಿ, ಪುರಸಭೆ ಮಾಜಿ ಸದಸ್ಯ ಅಬ್ದುಲ ಅಜೀಜ ನಾಯ್ಕೋಡಿ, ಹುಸೇನ ನಾಯ್ಕೋಡಿ ಮತ್ತಿತರರು ಇದ್ದರು.