ವಿಜಯಪುರ: ಜಿಲ್ಲೆಯಲ್ಲಿ ಪಂಗನಾಮದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಲಕ್ಕಿ ಡ್ರಾ ಲಾಟರಿ ಹೆಸರಿನಲ್ಲಿ ಜನರಿಂದ ಹಣ ಪಡೆದು ಹಾಡಹಗಲೇ ದರೋಡೆ ಮಾಡುತ್ತಿದ್ದವರ ಬಣ್ಣ ಈಗ ಬಯಲಾಗಿದೆ.
ವಿಜಯಪುರ ಸಮೀಪದ ಸಾರವಾಡದಲ್ಲಿ ಎಸ್. ಎಲ್. ಎಸ್ ಎಂಟರ್ಪ್ರೈಸಸ್ ಹೆಸರಿಲ್ಲಿ ಸಾಧಿಕ್ ಹಾಗೂ ಫಾತಿಮಾ ಎನ್ನುವ ದಂಪತಿ ಲಕ್ಕಿ ಡ್ರಾ ಸ್ಕೀಂ ಹೆಸರಿನಲ್ಲಿ ಲಾಟರಿ ದಂಧೆ ಆರಂಭಿಸಿದ್ದರು ಎನ್ನಲಾಗ್ತಿದೆ.
ಪ್ರತಿಯೊಬ್ಬರಿಂದಲೂ 700 ರೂಪಾಯಿ ಸಂಗ್ರಹಿಸಿ ಆಕರ್ಷಕ ಬಹುಮಾನ ನೀಡುವುದಾಗಿ ಹೇಳಿ ಮೋಸ ಮಾಡಿದ್ದಾರೆ. ಸಾರವಾಡ ಗ್ರಾಮದ ಈಶ್ವರ ದೇವಸ್ಥಾನದ ಆವರಣದಲ್ಲಿ ಒಂದೇ ಬಾರಿಗೆ ಲಾಟರಿ ಡ್ರಾ ಮಾಡುತ್ತೇವೆಂದು ಸಾರವಾಡ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರನ್ನು ನಂಬಿಸಿದ್ದರು. ಒಂದು ಲಕ್ಕಿ ಡ್ರಾ ಲಾಟರಿ ಕೂಪನ್ಗೆ 700 ರೂಪಾಯಿ ಪಡೆದುಕೊಂಡಿದ್ದಾರೆ. ಹೀಗೆ ಒಟ್ಟು 600 ಜನರಿಂದ 700 ರೂಪಾಯಿಯಂತೆ ಸಂಗ್ರಹಿಸಿದ್ದಾರೆ. ಕೆಲವರಿಗೆ ಅಗ್ಗದ ದರದ ವಸ್ತುಗಳನ್ನು ನೀಡಿದ್ದಾರಂತೆ.
ಫಾತಿಮಾ ಹಾಗೂ ಸಾಧಿಕ್ ದಂಪತಿ ಜನರಿಂದ ಒಟ್ಟು 42 ಲಕ್ಷ ರೂಪಾಯಿ ಸಂಗ್ರಹಿಸಿ ನಾಲ್ಕೈದು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕೆಲವರಿಗೆ ಮಾತ್ರ ವಿತರಿಸಿದ್ದಾರೆ ಎಂಬುದು ಮೋಸ ಹೋದವರ ಆರೋಪವಾಗಿದೆ.
ಈ ಸಂಬಂಧ ಮೋಸಕ್ಕೆ ಒಳಗಾದವರು ದೂರು ನೀಡಲು ಹಿಂದೇಟು ಹಾಕಿದ ಕಾರಣ ವಿಷಯ ತಿಳಿದಿದ್ದ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ದಂಪತಿಯನ್ನು ಬಂಧಿಸಿದ್ದಾರೆ. ದಂಪತಿಯ ಮೋಸದ ಲಾಟರಿ ದಂಧೆ ಬಗ್ಗೆ ಸಾರ್ವಜನಿಕರಿಂದಲೂ ಆಕ್ರೋಶ ವ್ಯಕ್ತವಾಗಿದೆ. ದಂಪತಿಗೆ ಕಠಿಣ ಶಿಕ್ಷೆ ವಿಧಿಸಿ, ನಮ್ಮ ಹಣ ಕೊಡಿಸಿ ಎಂದು ಒತ್ತಾಯಿಸಿದ್ದಾರೆ.
ಕಾನೂನು ಪ್ರಕಾರ ಇಂಥಹ ಲಕ್ಕಿ ಡ್ರಾ ಮೂಲಕ ಲಾಟರಿ ದಂಧೆ ನಡೆಸೋದು ಕಾನೂನುಬಾಹಿರ ಕೆಲಸವೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಹೇಳಿದ್ದಾರೆ.