ವಿಜಯಪುರ : ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ. ಮಲ್ಲನಗೌಡ ಪರೀಟ, ದೀಪಕ, ಸಚಿನ್ ಹೊಸಮನಿ ಹಾಗೂ ಸತೀಶ್ ಕುಮಾರ್ ಕಡುಮೈಲ ಬಂಧಿತ ಆರೋಪಿಗಳು.
ವಿಜಯಪುರ ತಾಲೂಕಿನ ಮಿಂಚನಾಳ ಗ್ರಾಮದ ಬಳಿ ಗೋವಾದಿಂದ ತಂದಿದ್ದ 40 ಬಾಕ್ಸ್ ಮದ್ಯವನ್ನು ಸಂಗ್ರಹಿಸಿಡಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಬಕಾರಿ ಉಪ ಆಯುಕ್ತ ಡಾ. ವೈ ಮಂಜುನಾಥ, ಸೈಯದ್ ಅಫ್ರೀನ್ ಹಾಗೂ ಉಪ ಅಧೀಕ್ಷಕ ವಜ್ಜರಮಟ್ಟಿ ಮಾರ್ಗದರ್ಶನದಲ್ಲಿ ದಾಳಿ ನಡೆಸಿ 40 ಬಾಕ್ಸ್ ಗೋವಾ ಮದ್ಯ ಹಾಗೂ ಮದ್ಯ ಸಾಗಾಣಿಕೆಗೆ ಬಳಸುತ್ತಿದ್ದ 2 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಸದ್ಯ ಆರೋಪಿಗಳಿಂದ 2 ವಾಹನ ಸೇರಿ ಅಂದಾಜು 10,35,000 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.