ವಿಜಯಪುರ: ಕಳೆದ ವರ್ಷ ಭೀಮಾ ನದಿ ಪ್ರವಾಹದಿಂದ ಜಿಲ್ಲೆಯಲ್ಲಿ ಸಾಕಷ್ಟು ಬೆಳೆ, ಜೀವ ಹಾನಿ ಸಂಭವಿಸಿತ್ತು. ಇದು ರೈತರ ಸಂಕಷ್ಟಕ್ಕೆ ಕಾರಣವಾಗಿತ್ತು. ಇದರ ಜತೆ ಭಾರೀ ಮಳೆಯಿಂದ ಜಿಲ್ಲೆಯ ಕೆರೆ ಕಟ್ಟೆ, ಬೋರ್ವೆಲ್ಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿ ಬರದನಾಡು ಸಹ ನೀರಾವರಿಗೆ ಒಳಪಡುವಂತಾಗಿದ್ದು, ರೈತರ ಸಂತಸಕ್ಕೆ ಕಾರಣವಾಗಿತ್ತು. ಆದರೆ ಇಂಡಿ ತಾಲೂಕಿನ ಹಳಗುಣಕಿ ಗ್ರಾಮದ ಬೃಹತ್ ಕೆರೆ ತುಂಬಿ ಹರಿಯುತ್ತಿದ್ದರೂ ಈ ಭಾಗದ ಜನರಲ್ಲಿ ಆತಂಕ ಹೆಚ್ಚಿಸಿದೆ. ಇದಕ್ಕೆ ಕಾರಣವಾಗಿದ್ದು ಕೆರೆಯ ಮೇಲ್ಬಾಗದಲ್ಲಿರುವ ಕೆರೆಯ ಏರಿ.
ಹೌದು, ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಕಪನಿಂಬರಗಿ ಹಾಗೂ ಗುಂದವಾನ ಗ್ರಾಮದ ಮಧ್ಯೆ ಇರುವ ಈ ಕೆರೆ 500ಕ್ಕೂ ಅಧಿಕ ಎಕರೆ ಇದೆ. ಕೆರೆ ನಂಬಿಕೊಂಡು ಹತ್ತಾರು ಗ್ರಾಮದ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಕಪನಿಂಬರಗಿ ಹಾಗೂ ಗುಂದವಾನ ಗ್ರಾಮಕ್ಕೆ ಹೋಗುವ ಕಾಲು ದಾರಿಯ ಕೆರೆ ಏರಿ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಆಕಸ್ಮಿಕವಾಗಿ ಏರಿ ಒಡೆದರೆ ಹಲವು ಗ್ರಾಮಗಳು ಕೆರೆಯ ನೀರಿನಿಂದ ಮುಳುಗಡೆಯಾಗಲಿವೆ.
ಸುಮಾರು 1 ಕಿ.ಮೀ.ನಷ್ಟು ಉದ್ದ ಇರುವ ಕೆರೆಯ ಏರಿಯ ಮೇಲೆ ನಿತ್ಯ ಗ್ರಾಮಸ್ಥರು ಸಂಚರಿಸುತ್ತಾರೆ. ಹಲವು ಗ್ರಾಮಗಳಿಗೆ ಈ ಕೆರೆ ಏರಿ ಶಾರ್ಟ್ಕಟ್ ರಸ್ತೆ ಸಹ ಆಗಿದೆ. ಆಕಸ್ಮಿಕವಾಗಿ ಇದು ಒಡೆದರೆ ದೊಡ್ಡ ಮಟ್ಟದ ಅಪಾಯವನ್ನು ಈ ಭಾಗದ ಜನರು ಎದುರಿಸಬೇಕಾಗುತ್ತದೆ.
ಸುಮಾರು 30 ಅಡಿಗೂ ಎತ್ತರದ ಈ ಕೆರೆ ಏರಿ 2008ರ ನಂತರ ಮೊದಲು ಬಾರಿ ಪೂರ್ಣ ಭರ್ತಿಯಾಗಿದೆ. ನಿರ್ವಹಣೆ ಇಲ್ಲದೇ ಕೆರೆಯಲ್ಲಿ ಮುಳ್ಳು ಕಂಟಿಗಳು ಬೆಳೆದು ನಿಂತಿವೆ. ಇದರಿಂದ ನೀರು ಸಾರಾಗವಾಗಿ ಹರಿಯುತ್ತಿಲ್ಲ. ಹೀಗಾಗಿ ನಿಂತ ನೀರಿನಿಂದ ಕೆರೆ ಏರಿ ಮತ್ತಷ್ಟು ಬಿರುಕು ಬಿಡುತ್ತಿದೆ. ಕೆರೆಯ ಏರಿ ಮೇಲಿನ ಬಿರುಕು ಮತ್ತಷ್ಟು ಆಳವಾದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ ಎನ್ನುವ ಆತಂಕ ಈ ಭಾಗದ ಗ್ರಾಮಸ್ಥರದ್ದಾಗಿದೆ.
ಈ ಕೆರೆ ನೀರಿನಿಂದ ದ್ರಾಕ್ಷಿ, ದಾಳಿಂಬೆ, ಕಬ್ಬು ಸೇರಿದಂತೆ ತೋಟಗಾರಿಕೆ ಮತ್ತು ಕೃಷಿ ಬೆಳೆಗಳನ್ನು ಬೆಳೆಯಲಾಗಿದೆ. ಇದರ ಜತೆ ಕೆರೆಯ ಏರಿಯಿಂದ ನೀರು ಸೊರಿಕೆಯಾದರೆ ದೊಡ್ಡ ಅನಾಹುತವಾಗಬಹುದು. ತಕ್ಷಣ ಜಿಲ್ಲಾಡಳಿತ ಮತ್ತು ಸಣ್ಣ ನೀರಾವರಿ ಇಲಾಖೆ ಈ ಹಳಗುಣಕಿ ಕೆರೆಯ ಏರಿ ಭದ್ರತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.