ವಿಜಯಪುರ: ಉತ್ತರ ಕರ್ನಾಟಕದ ಪ್ರಮುಖ ಆಕರ್ಷಣೆಯಾಗಿದ್ದ ಜೋಳದ ರೊಟ್ಟಿ, ಬದನೆಕಾಯಿ ಎಣ್ಣೆಗಾಯಿ ಪಲ್ಯ ಊಟ ಮಾಡಲು ದೇಶ - ವಿದೇಶಗಳಿಂದ ಪ್ರವಾಸಿಗರು ಬರುವ ಕಾಲವಿತ್ತು. ಆದರೆ, ಸಾಂಪ್ರದಾಯಿಕ ಬಿಳಿ ಜೋಳದ ಬಿತ್ತನೆ ಪ್ರತಿ ವರ್ಷ ಕಡಿಮೆಯಾಗುತ್ತಿದ್ದು, ಮುಂದೊಂದು ದಿನ ಜೋಳದ ತೆನೆ ಪೋಟೋದಲ್ಲಿ ನೋಡಬೇಕಾದ ಪರಿಸ್ಥಿತಿ ಹತ್ತಿರವಾಗುತ್ತಿದೆ.
ಉತ್ತರ ಕರ್ನಾಟಕದ ಬ್ರ್ಯಾಂಡ್ ಬಿಳಿ ಜೋಳ ಬಿತ್ತನೆ ಕಾರ್ಯ ಪ್ರತೀ ವರ್ಷ ಕಡಿಮೆಯಾಗುತ್ತಿದೆ. ದೇಹಕ್ಕೆ ತಂಪು ಹಾಗೂ ಆರೋಗ್ಯಕ್ಕೆ ವೈದ್ಯರು ಸಲಹೆ ನೀಡುವ ರೊಟ್ಟಿ ಮಾಡಲು ಮಾರುಕಟ್ಟೆಯಲ್ಲಿ ಜೋಳವೇ ದೊರೆಯುತ್ತಿಲ್ಲ. ಇದಕ್ಕೆ ಕಾರಣವೇನು? ಆಧುನಿಕ ಆಹಾರ ಪದ್ದತಿಗೆ ರೊಟ್ಟಿ ಊಟ ಬಲಿಯಾಗುತ್ತಿದೆಯಾ? ಜೋಳ ಬಿತ್ತನೆಗೆ ಸರ್ಕಾರ ಯಾವ ರೀತಿ ಪ್ರೋತ್ಸಾಹ ನೀಡಲು ಮುಂದಾಗಿದೆ ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ.
ಕರ್ನಾಟಕದ ವಿವಿಧ ಭಾಗದಲ್ಲಿ ಒಂದೊಂದು ಖಾದ್ಯ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಅದೇ ರೀತಿ ಉತ್ತರ ಕರ್ನಾಟಕ (ಮುಂಬೈ ಕರ್ನಾಟಕ), ಹೈದರಾಬಾದ್ ಕರ್ನಾಟಕದಲ್ಲಿ ರೊಟ್ಟಿ ಅನಾದಿ ಕಾಲದಿಂದಲೂ ಹೆಚ್ಚು ಪ್ರಚಲಿತದಲ್ಲಿದೆ. ಉತ್ತರ ಕರ್ನಾಟಕ ಭಾಗಕ್ಕೆ ಬರುವ ಜನರು ರೊಟ್ಟಿ ಊಟ ಸವಿಯದೇ ಹೋಗಲಾರರು. ಆದರೆ, ಕಳೆದ ಐದಾರು ವರ್ಷಗಳಿಂದ ಜೋಳ ಬಿತ್ತನೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದೆ.
ಗೋದಿ, ಅಕ್ಕಿ ಕಡೆ ಹೆಚ್ಚಿದ ಜನರ ಒಲವು:
ವಿಜಯಪುರ ಜಿಲ್ಲೆಯಲ್ಲಿಯೇ 7 ಲಕ್ಷ ಹೆಕ್ಟೇರ್ ಪ್ರದೇಶದ ಕೃಷಿ ಭೂಮಿಯಲ್ಲಿ 5 ಲಕ್ಷ ಹೆಕ್ಟೇರ್ನಲ್ಲಿ ಜೋಳ ಬೆಳೆಯಲಾಗುತ್ತಿತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಇಡೀ ವಿಜಯಪುರ ಜಿಲ್ಲೆಯಲ್ಲಿ 60-70ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಬಂದು ನಿಂತಿದೆ. ಇದಕ್ಕೆ ಮುಖ್ಯ ಕಾರಣ ಕೂಲಿಕಾರರ ಕೊರತೆ, ಆಧುನಿಕ ಯಂತ್ರಗಳ ಬಳಕೆ ಇಲ್ಲದಿರುವುದು. ಹಾಗೂ ಜನ ಸಾಮಾನ್ಯರು ಗೋದಿ, ಅಕ್ಕಿ ಕಡೆ ಹೆಚ್ಚು ಆಸಕ್ತಿ ಹೊಂದಿರುವುದು ಎನ್ನುತ್ತಾರೆ ಕೃಷಿ ಅಧಿಕಾರಿಗಳು.
ಅಧಿಕ ಕೂಲಿ:
ಜೋಳ ಬಿತ್ತನೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೇ ಜೋಳದ ದಂಟು ಕೊಯ್ಲಿಗೆ ಹಾಗೂ ಕಾಳು ಬಿಡಿಸಲು ಹೆಚ್ಚಿನ ಕೂಲಿಕಾರರ ಅವಶ್ಯಕತೆಯಿದೆ. ಇದರ ಜತೆ ಸರ್ಕಾರ ಒಂದು ಕ್ವಿಂಟಲ್ ಜೋಳಕ್ಕೆ 2000 - 2500 ಮಾತ್ರ ಬೆಲೆ ನಿಗದಿ ಮಾಡಿದೆ. ಇದರ ಬದಲು ತೊಗರಿ ಬೆಳೆಗೆ ಕ್ವಿಂಟಲ್ಗೆ 6 ಸಾವಿರ ರೂ. ಸರ್ಕಾರವೇ ನಿಗದಿ ಪಡಿಸಿದೆ. ಎಪಿಎಂಸಿಯಲ್ಲಿ ಹೆಚ್ಚಿನ ಬೆಲೆಗೆ ಹೊರ ರಾಜ್ಯದ ಜನ ಖರೀದಿಗೆ ಬರುತ್ತಾರೆ. ಇದಕ್ಕೆ ಹೆಚ್ಚಿನ ಕೂಲಿ ಕಾರ್ಮಿಕರ ಅವಶ್ಯಕತೆ ಇರದ ಕಾರಣ ಹೆಚ್ಚಾಗಿ ರೈತರು ಜೋಳ ಬಿಟ್ಟು ತೊಗರಿ ಬೆಳೆ ಬೇಳೆಯುವತ್ತ ಮುಖ ಮಾಡಿದ್ದಾರೆ. ಹೀಗಾಗಿ ಈ ವರ್ಷ 5.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆದ ಕಾರಣ ರೈತರು ಜೋಳದ ಬೆಳೆ ಕೈಬಿಡುವಂತಾಗಿದೆ.
ಸಬ್ಸಿಡಿ ದರದಲ್ಲಿ ಯಂತ್ರ ನೀಡಲು ಯೋಜನೆ:
ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಕಲಬುರಗಿ, ಕೊಪ್ಪಳ ಭಾಗದಲ್ಲಿ ಹಿಂಗಾರು ಬೆಳೆಯನ್ನಾಗಿ ಹಾಗೂ ಬೀದರ್, ಬಳ್ಳಾರಿ, ಧಾರವಾಡ, ರಾಯಚೂರು ಭಾಗದಲ್ಲಿ ಮುಂಗಾರು ಬೆಳೆಯಾಗಿ ಬೆಳೆಯಲಾಗುತ್ತದೆ. ಇದರ ಆಧಾರದ ಮೇಲೆ ಜೋಳ ಬಿತ್ತನೆ, ಕಟಾವಿಗೆ ಆಧುನಿಕ ಯಂತ್ರಗಳನ್ನು ಸರ್ಕಾರ ರೈತರಿಗೆ ಸಬ್ಸಿಡಿ ದರದಲ್ಲಿ ಒದಗಿಸಿ ಜೋಳ ಬೆಳೆಯಲು ಉತ್ತೇಜನ ನೀಡುವ ಯೋಜನೆ ಹಾಕಿಕೊಂಡಿದೆ.