ಮುದ್ದೇಬಿಹಾಳ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಮೇಲೆ ಹಿಡಿತವನ್ನು ಸಾಧಿಸಲು ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದು ಸುಗ್ರಿವಾಜ್ಞೆ ಹೊರಡಿಸಿದ್ದು ಈ ಕಾಯ್ದೆ ರೈತರ ಜಮೀನು ಕಿತ್ತಿಕೊಳ್ಳುವಂತಹದ್ದಾಗಿದೆ ಎಂದು ಜೆಡಿಎಸ್ ಮುಖಂಡ ಖಾಜಾಹುಸೇನ ಚೌದ್ರಿ ಅವರು ಹೇಳಿದರು.
ವಿಜಯಪುರ ಜಿಲ್ಲಾ ಜನತಾದಳದ ವತಿಯಿಂದ ಇಂದು ಪಟ್ಟಣದಲ್ಲಿ ಹಮ್ಮಿಕೊಂಡ ಪ್ರತಿಭಟನಾ ಮೆರವಣಿಗೆಯ ನಂತರ ತಹಸೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿನ ಅತ್ಯಂತ ಶ್ರೀಮಂತರು ಮತ್ತು ದೊಡ್ಡ ದೊಡ್ಡ ಕಾರ್ಖಾನೆಯ ಮಾಲೀಕರು ರೈತರ ಭೂಮಿಯನ್ನು ಖರೀದಿಸುವದರೊಂದಿಗೆ ಮುಗ್ದ ರೈತರ ಮೇಲೆ ಮುಂದೆ ದಬ್ಬಾಳಿಕೆಗಳು ನಡೆಯಲಿವೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದಿದ್ದು ಇದೂ ಕೂಡಾ ರೈತ ವಿರೋಧಿ ನೀತಿಯಾಗಿದೆ ಎಂದು ದೂರಿದರು.
ಕಾರ್ಖಾನೆಯ ಮಾಲೀಕರು ರೈತರ ಜಮೀನುಗಳಿಗೆ ಬಂದು ಮಾಲು ಖರೀದಿ ಮಾಡಿಕೊಂಡು ಹೋಗುವುದರಿಂದ ಹಣ ನೀಡುವದರಲ್ಲಿ ಮೋಸ ಮಾಡುವ ಸಾಧ್ಯತೆಗಳೇ ಹೆಚ್ಚಾಗಿ ಕಾಣುತ್ತೇವೆ. ಕೂಡಲೇ ಭೂ ಸುಧಾರಣೆ ಕಾಯ್ದೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆದು ಈ ದೇಶದ ಬೆನ್ನೆಲುಬು ರೈತನ ಹಿತವನ್ನು ಕಾಪಾಡಬೇಕೆಂದು ಒತ್ತಾಯಿಸಿದರು.
ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಬಸನಗೌಡ ಮಾಡಗಿ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.