ವಿಜಯಪುರ: ಇಂಡಿ ತಾಲೂಕಿನ 12 ಗ್ರಾಮಗಳನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಪ್ರವಾಹಕ್ಕೆ ತುತ್ತಾದ ಗ್ರಾಮಗಳಿಗೆ ಪರಿಹಾರದ ಹಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕಳೆದ ವಾರ ಸುರಿದ ಭಾರಿ ಮಳೆಯಿಂದಾಗಿ ಇಂಡಿ ಭಾಗದ 12 ಗ್ರಾಮಗಳು ಸಂಪೂರ್ಣವಾಗಿ ಮುಳುಗಿಹೋಗಿದ್ದು, 3 ಸಾವಿರಕ್ಕೂ ಅಧಿಕ ಜನರ ಜೀವನ ಬೀದಿಗೆ ಬಂದಿದೆ. ನದಿಪಾತ್ರದ ಜನರ ಬದುಕು ಸಂಕಷ್ಟದಲ್ಲಿ ಸಿಲುಕಿದ್ದು, ಶೇಂಗಾ, ದಾಳಿಂಬೆ, ಈರುಳ್ಳಿ, ಕಬ್ಬು, ಬಾಳೆ, ತೊಗರಿ ಸೇರಿದಂತೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಅಲ್ಲದೆ ಮನೆಯಲ್ಲಿದ್ದ ದವಸ ಧಾನ್ಯಗಳು ಕೂಡ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದೆ. ಇಂಡಿ ತಾಲೂಕಿನಲ್ಲಿ ಅಂದಾಜು 6,525 ಹೆಕ್ಟರ್ ಪ್ರದೇಶ ಬೆಳೆ ನಾಶವಾಗಿದ್ದು, ಮುಖ್ಯಮಂತ್ರಿಗಳು ಕೂಡಲೇ ಗ್ರಾಮಗಳನ್ನು ಸ್ಥಳಾಂತರಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಕೂಡಲೇ ರಾಜ್ಯ ಸರ್ಕಾರ ಇಂಡಿ ತಾಲೂಕಿನ 12 ಗ್ರಾಮಗಳನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ಗ್ರಾಮಗಳನ್ನು ಸ್ಥಳಾಂತರ ಮಾಡುವ ಜೊತೆಗೆ ಹಾನಿಗೊಳಗಾದ ರೈತರ ನೆರವಿಗೆ ಧಾವಿಸುವಂತೆ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.