ವಿಜಯಪುರ : ಅಕ್ರಮವಾಗಿ ಸರ್ಕಾರಿ ಜಾಗವನ್ನು ಕಬಳಿಸಿ, ಮನೆ, ಅಂಗಡಿಗಳನ್ನು ಹೆಚ್ಚುವರಿ ಜಾಗದಲ್ಲಿ ನಿರ್ಮಿಸಿಕೊಂಡಿದ್ದ ಮಾಲೀಕರಿಗೆ ಮಹಾನಗರ ಪಾಲಿಕೆ ಇಂದು ಬೆಳಿಗ್ಗೆ ಶಾಕ್ ನೀಡಿದೆ. ಜೆಸಿಬಿ ಯಂತ್ರಗಳ ಮೂಲಕ ಈ ಕಟ್ಟಡಗಳ ಅತಿಕ್ರಮ ತೆರವು ಕಾರ್ಯ ನಡೆಸಿತು. ನಗರದ ಮುರಾಣಕೇರಿಯಲ್ಲಿ ನಿರ್ಮಿಸಲಾಗಿದ್ದ ಅಕ್ರಮ ಮನೆಗಳನ್ನು ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ನೇತೃತ್ವದಲ್ಲಿ ತೆರವು ಮಾಡಿದರು. ಇದಕ್ಕೂ ಮುನ್ನ ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗಿತ್ತು. ಅದರಂತೆ ಮಾಲೀಕರು ಮನೆ ಖಾಲಿ ಮಾಡಿದ್ದರು. ಇದಾದ ನಂತರ ಕಟ್ಟಡಗಳನ್ನು ನೆಲಸಮ ಮಾಡಲಾಗುತ್ತಿದೆ ಎಂದು ಪಾಲಿಕೆ ಮೂಲಗಳು ಮಾಹಿತಿ ನೀಡಿವೆ.
ಯಾವುದೇ ಅಹಿತಕರ ಘಟನೆಗಳು ನಡೆದಂತೆ ಗೋಳಗುಮ್ಮಟ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು. ಅಭಿವೃದ್ಧಿ ಕಾಮಗಾರಿಗಳ ಹಿನ್ನೆಲೆಯಲ್ಲಿ ಅತಿಕ್ರಮಿತ ಕಟ್ಟಡಗಳನ್ನು ತೆರವು ಗೊಳಿಸಲಾಗಿದೆ. ಕಳೆದ ಎರಡು ದಿನಗಳ ಹಿಂದಷ್ಟೇ ರಸ್ತೆ ಅತಿಕ್ರಮಣ ಮಾಡಿಕೊಂಡು ಗೂಡಂಗಡಿ ನಿರ್ಮಿಸಿದವರಿಗೂ ಮಹಾನಗರ ಪಾಲಿಕೆ ಶಾಕ್ ಕೊಟ್ಟಿತ್ತು.
ವಿಜಯಪುರದಲ್ಲಿ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಮುಖ್ಯವಾಗಿ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಳ್ಳಲಾಗಿದೆ. ನಗರದ ಬಹುತೇಕ ಬಡಾವಣೆ ಹಾಗೂ ಮುಖ್ಯರಸ್ತೆಗಳಲ್ಲಿ ಪಾಲಿಕೆಯ ಅನುಮತಿ ಇಲ್ಲದೇ ಅಂಗಡಿಗಳನ್ನು ನಿರ್ಮಿಸಿಕೊಂಡು ವ್ಯಾಪಾರ ವಹಿವಾಟು ಮಾಡಲಾಗುತ್ತಿತ್ತು. ಇದರಿಂದಾಗಿ ವಾಹನ ಸಂಚಾರ ದಟ್ಟಣೆಯಾಗಿ ದಿನನಿತ್ಯ ಸಂಚರಿಸುವ ಸವಾರರು ಕಿರಿಕಿರಿ ಅನುಭವಿಸುತ್ತಿದ್ದರು.
ತೆರವಿಗೆ ವಿರೋಧ: ಈ ಕುರಿತು ಪಾಲಿಕೆಗೆ ಸಾಕಷ್ಟು ದೂರುಗಳು ಬಂದಿದ್ದು ವಾರದ ಮುಂಚೆ ಸಂಚಾರಕ್ಕೆ ಅಡಚಣೆಯಾದ ಅಂಗಡಿ, ಮನೆಗಳ ಮಾಲೀಕರಿಗೆ ನೋಟಿಸ್ ನೀಡಿ ತೆರವುಗೊಳಿಸುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ತೆರವು ಮಾಡಿದ ಅಂಗಡಿ, ಮನೆಗಳನ್ನು ಜೆಸಿಬಿ ಮೂಲಕ ಒಡೆದು ಹಾಕಲಾಗಿದೆ. ಈ ಸಂದರ್ಭದಲ್ಲಿ ಕೆಲವು ಮನೆ ಹಾಗು ಅಂಗಡಿ ಮಾಲೀಕರು ವಿರೋಧ ವ್ಯಕ್ತಪಡಿಸಿದರು.
"ಕಳೆದ 10-20 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ಸಣ್ಣ ವ್ಯಾಪಾರದ ಮೂಲಕ ಬದುಕು ಕಟ್ಟಿಕೊಂಡಿದ್ದೇವೆ. ಏಕಾಏಕಿ ಮನೆ, ಅಂಗಡಿಗಳನ್ನು ತೆರವುಗೊಳಿಸಿದರೆ ನಾವು ಬೀದಿ ಪಾಲಾಗುತ್ತೇವೆ" ಎಂದು ಗೋಳಾಡಿ, ಪರ್ಯಾಯ ವ್ಯವಸ್ಥೆ ಮಾಡಿ. ನಂತರ ನಮ್ಮನ್ನು ತೆರವುಗೊಳಿಸಿ ಎಂದು ಆಗ್ರಹಿಸಿದರು.
ಇದನ್ನೂ ಓದಿ: ವಿಜಯಪುರದಲ್ಲಿ ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರ .. ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳ ಬಂಧನ