ಮುದ್ದೇಬಿಹಾಳ : ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಎಲ್ಲಿ ಮಹಿಳೆಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವರು ನೆಲೆಸಿರುವುದಾಗಿ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಉದ್ಯೋಗಸ್ತರಲ್ಲಿರುವ ಮಹಿಳೆಯರು ಇಂದು ನಮ್ಮೊಂದಿಗೆ ಮಾತನಾಡಿದ್ದಾರೆ.
ಮುದ್ದೇಬಿಹಾಳ ಕೆನರಾ ಬ್ಯಾಂಕ್ ವ್ಯವಸ್ಥಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಮತಿ ಶಾರದಾ ಹೊನಕೇರಿ ಮಾತನಾಡಿ, ಮಹಿಳೆಗೆ ಸಾಧನೆ ಮಾಡುವುದಕ್ಕೆ ಆಗುವುದಿಲ್ಲ ಎಂಬ ಮಾತೇ ಇಲ್ಲ. ಆದರೆ, ಆಕೆಗೆ ಕುಟುಂಬದ ಪ್ರೋತ್ಸಾಹ ಬಹಳ ಮುಖ್ಯವಾಗುತ್ತದೆ. ಕಾಲು ಎಳೆಯುವವರೇ ಹೆಚ್ಚಾಗಿರುವ ಈ ಕಾಲಘಟ್ಟದಲ್ಲಿ ಯಶಸ್ಸಿನ ಮೆಟ್ಟಿಲೇರಲು ನಾವು ಶಕ್ತಿಮೀರಿ ಹೋರಾಟದಿಂದ ಸಾಧನೆ ತೋರಬೇಕು ಎಂದು ಹೇಳಿದ್ದಾರೆ.
ಮಹಿಳಾಪರ ಚಿಂತಕಿ ರಾಜೇಶ್ವರಿ ಪಾಟೀಲ್ ನಡಹಳ್ಳಿ ಮಾತನಾಡಿದ್ದು, ಮಹಿಳೆಗೆ ಸಮಾಜದಲ್ಲಿ ಇನ್ನೂ ಮೀಸಲು ಅಗತ್ಯವಿದೆ ಎಂದು ಹೇಳಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಗೆ ಅವಕಾಶಗಳು ಅನಿವಾರ್ಯತೆಯ ಸಂದರ್ಭದಲ್ಲಿ ಸೃಷ್ಟಿಯಾಗಿದ್ದು, ಈ ಸಂದರ್ಭ ರೂಪಗೊಂಡ ನೂರಾರು ಸಾಧಕಿಯರ ಸಾಹಸ ಗಾಥೆಗಳನ್ನು ನಾವು ಗಮನಿಸಿದ್ದೇವೆ. ಆದರೆ ಇಂದು ಮಹಿಳಾ ಮೀಸಲಾತಿ ಹೆಚ್ಚಿಸುವಂತೆ ಅವರು ಹೇಳಿದ್ದಾರೆ.
ಉಪನ್ಯಾಸಕಿ ಜ್ಯೋತಿ ಹಿರೇಮಠ ಮಹಿಳಾ ದಿನಾಚರಣೆ ಬಗ್ಗೆ ಮಾತನಾಡಿ, ಮಹಿಳೆಗೆ ಗೌರವ ಕೇಳಿ ಪಡೆಯುವುದಲ್ಲ. ಅದು ತನ್ನಿಂದ ತಾನೇ ಬರಬೇಕು ಎಂದು ಹೇಳಿದರು. ಮಹಿಳೆಯನ್ನು ದೇವತೆ ಎಂದು ಪೂಜಿಸುವ ರಾಷ್ಟ್ರದಲ್ಲಿ ಮತ್ತೊಂದೆಡೆ ಭೋಗದ ವಸ್ತುವಾಗಿ ಕಾಣುತ್ತಿರುವುದು ನೋವಿನ ಸಂಗತಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಶಿಕ್ಷಕಿ ವಿಜಯಲಕ್ಷ್ಮಿ ಹಂಪನಗೌಡರ ಮಾತನಾಡಿ, ಮನೆಯಲ್ಲಿ ತಾಯಿ ಮಕ್ಕಳಿಗೆ ನೀಡುವ ಸಂಸ್ಕಾರದಲ್ಲಿ ಉತ್ತಮ ಸಮಾಜ ರೂಪುಗೊಳ್ಳುತ್ತದೆ. ಪುರುಷ ಪ್ರಧಾನ ಸಮಾಜದಲ್ಲಿ ಪುರುಷರಷ್ಟೇ ಮಹಿಳೆಯರೂ ಇಂದು ಅನೇಕ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ವಿದ್ಯಾಸ್ಪೂರ್ತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಬಸಮ್ಮ ಸಿದರೆಡ್ಡಿ ಮಾತನಾಡಿ, ಶಿಕ್ಷಣವೇ ಮಹಿಳೆಗೆ ಅಸ್ತ್ರ, ಶಿಕ್ಷಣದಿಂದಲೇ ಇಂದು ಮಹಿಳೆಯರು ಅನೇಕ ರಂಗದಲ್ಲಿ ಮುಂಚೂಣಿಯಲ್ಲಿದ್ದಾರೆ.ಹಾಗಾಗಿ ಮಹಿಳೆಗೆ ಶಿಕ್ಷಣ ಅತಿ ಮುಖ್ಯ ಎಂದು ಅವರು ಹೇಳಿದ್ದಾರೆ.
ಓದಿ :ರಷ್ಯಾದಿಂದ ತೈಲ ಖರೀದಿಗೆ ಬೀಳುತ್ತಾ ನಿರ್ಬಂಧ?: ವಿಶ್ವಸಂಸ್ಥೆಯಲ್ಲಿ ಏನೆಲ್ಲಾ ಬೆಳವಣಿಗೆಗಳು ನಡೆದವು ಗೊತ್ತಾ?