ವಿಜಯಪುರ: ಪರಿಸರಕ್ಕೆ ಅಪಾಯ ತಂದೊಡ್ಡುವ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಗಣೇಶ ವಿಗ್ರಹಗಳ ಮಾರಾಟಕ್ಕೆ ನಿಷೇಧ ಹೇರುವಂತೆ ಒತ್ತಾಯಿಸಿ ‘ನನ್ನ ಗಿಡ ನನ್ನ ಭೂಮಿ ಪರಿಸರ’ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಪರಿಸರಕ್ಕೆ ಹಾನಿಕಾರಕ ಪಿಒಪಿ ಗಣಪ ಮೂರ್ತಿಗಳನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಿರುವುದು ವಿಷಾದಕರ ಸಂಗತಿ. ಅವುಗಳನ್ನು ಕೆರೆ, ನದಿ, ಹೊಂಡಗಳಲ್ಲಿ ವಿಸರ್ಜಿಸುವುರಿಂದ ವಿಷಪೂರಿತ ರಾಸಾಯನಿಕ ಪರಿಸರದ ಮೇಲೆ ಪ್ರಭಾವ ಬೀರುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ, ಜನರ ಆರೋಗ್ಯದ ಮೇಲೆಯೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ನದಿ, ಕೆರೆಗಳ ನೀರು ವಿಷಕಾರಿಯಾಗಿ ಪ್ರಾಣಿ-ಪಕ್ಷಿಗಳ ಜೀವಕ್ಕೆ ತೊಂದರೆ ಉಂಟಾಗುತ್ತಿದೆ. ಕೂಡಲೇ ಪಿಒಪಿ ಗಣೇಶ ನಿಷೇಧಿಸಿ ಗಣೇಶ ಹಬ್ಬಕ್ಕೆ ಪರಿಸರ ಸ್ನೇಹಿ ಮಣ್ಣಿನ ಗಣಪ ಬಳಕೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.